ನೀರಾವರಿ ಸೌಲಭ್ಯ ಮಾಡಿಕೊಂಡು ಹನಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಪಪ್ಪಾಯಿ ಮತ್ತು ಬಾಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಮಳೆ ಅನಿಶ್ಚಿತತೆ ಹಿನ್ನೆಲೆಯಲ್ಲಿ ಬಹುತೇಕ ರೈತರು ದೀರ್ಘಾವಧಿಯ ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ತೋರಿ ಪಪ್ಪಾಯಿ, ಬಾಳೆ ಬೆಳೆ ನಾಟಿ ಮಾಡಿದ್ದಾರೆ. ಆದರೆ, ಸರ್ಕಾರ ಮಾತ್ರ ಹೂವಿನ ಹಡಗಲಿ ತಾಲೂಕಿಗೆ 2.50 ಎಕರೆ ಮಾತ್ರ ಗುರಿ ನಿಗದಿ ಮಾಡಿದೆ.ಹೌದು, ತುಂಗಭದ್ರಾ ನದಿ ತೀರ ಹೊರತು ಪಡಿಸಿ, ಉಳಿದ ಕಡೆಗಳಲ್ಲಿ ಕೊಳವೆಬಾವಿ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡು ಹನಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಪಪ್ಪಾಯಿ ಮತ್ತು ಬಾಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೈತರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ನರೇಗಾ ಯೋಜನೆ ಸಹಯೋಗದಲ್ಲಿ 5 ಎಕರೆಗೆ ಕಾರ್ಮಿಕರಿಗೆ, ಕೂಲಿ ಹಾಗೂ ಸಲಕರಣೆ ವೆಚ್ಚ ಸೇರಿ ₹1.50 ಲಕ್ಷದವರೆಗೂ ಹಣ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಪಪ್ಪಾಯಿ ಮತ್ತು ಬಾಳೆ ಬೆಳೆಯನ್ನು ನರೇಗಾ ಯೋಜನೆಯಿಂದ ಕೈ ಬಿಡಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹನಿ ನೀರಾವರಿ ಸೇರಿದಂತೆ ಸಣ್ಣಪುಟ್ಟ ಸೌಲಭ್ಯಗಳನ್ನು ಮಾತ್ರ ನೀಡಲಾಗುತ್ತಿದೆ.
ಕಳೆದ ವರ್ಷ ಪ್ರತಿ ತಾಲೂಕಿಗೆ ಪಪ್ಪಾಯಿ, ಬಾಳೆ ತಲಾ 20 ಎಕರೆಯಷ್ಟು ಗುರಿ ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ಸರ್ಕಾರ ಸೌಲಭ್ಯಗಳ ಬೆನ್ನು ಬಿದ್ದ ರೈತರು ಪಪ್ಪಾಯಿ ಮತ್ತು ಬಾಳೆ ಬೆಳೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಇಡೀ ರಾಜ್ಯದ ಪ್ರತಿ ತಾಲೂಕಿಗೆ ಪಪ್ಪಾಯಿ 2.50 ಎಕರೆ, ಬಾಳೆ 2.50 ಎಕರೆ ಮಾತ್ರ ಗುರಿ ನಿಗದಿ ಮಾಡಿದೆ. ತೋಟಗಾರಿಕೆ ಇಲಾಖೆ ಸೌಲಭ್ಯ ಪಡೆಯಲು ಬಾಳೆ, ಪಪ್ಪಾಯಿ ಬೆಳೆ ಸೇರಿ 200ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಈ ವರೆಗೂ 170ರಿಂದ 190 ಎಕರೆಯಷ್ಟು ಪಪ್ಪಾಯಿ ಬೆಳೆ ನಾಟಿ ಮಾಡಿದ್ದಾರೆ. ಇತ್ತ 200 ಎಕರೆಯಷ್ಟು ಬಾಳೆ ಬೆಳೆ ಬೆಳೆಯುತ್ತಿದ್ದಾರೆ. ರಾಜ್ಯದ ಎಲ್ಲ ಕಡೆಗೂ ಬಾಳೆ, ಪಪ್ಪಾಯಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಇಡೀ ರಾಜ್ಯಕ್ಕೆ ಸರಿ ಸುಮಾರು 500 ಎಕರೆ ಮಾತ್ರ ಗುರಿ ನಿಗದಿ ಮಾಡಿದ್ದಾರೆ.ಹೂವಿನಹಡಗಲಿ ತಾಲೂಕಿನಲ್ಲಿ ಹೆಚ್ಚು ರೈತರು ಬಾಳೆ ಮತ್ತು ಪಪ್ಪಾಯಿ ಬೆಳೆ ನಾಟಿ ಮಾಡಿದ್ದಾರೆ. ಬೇಡಿಕೆ ಹೆಚ್ಚಿದೆ. ಆದರೆ, ಗುರಿ ನಿಗದಿ ಮಾತ್ರ ತೀರಾ ಕಡಿಮೆ ನೀಡಿದ್ದಾರೆ. ರೈತರಿಗೆ ಹೆಚ್ಚು ಅನುದಾನ ನೀಡಲು ಮೇಲಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎನ್ನುತ್ತಾರೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ನಾಗರಾಜ.
ಬಾಳೆ ಬೆಳೆ ಬೆಳೆಯಲು ನರೇಗಾ ಯೋಜನೆಯಲ್ಲಿ ಸೌಲಭ್ಯ ಇತ್ತು. ಸರ್ಕಾರ ಈಗ ಈ ಸೌಲಭ್ಯ ನೀಡುತ್ತಿಲ್ಲ. 9 ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಇನ್ನೇನು ಹೊಂಬಾಳೆ ಬಿಡುವ ವೇಳೆಯೇ ಮಾರುಕಟ್ಟೆ ಬೆಲೆ ಕುಸಿತ ಮತ್ತು ನಿರ್ವಹಣೆ ಮಾಡಲಾಗದೇ ಬೆಳೆ ನಾಶ ಮಾಡಿದ್ದೇನೆ ಎನ್ನುತ್ತಾರೆ ಮುದೇನೂರು ರೈತ ಎಂ.ಮಾಲತೇಶ.