ನಾಳೆ ರೈತ, ಕೂಲಿಕಾರ, ಕಾರ್ಮಿಕರ ಮುಷ್ಕರ

| Published : Feb 15 2024, 01:15 AM IST

ಸಾರಾಂಶ

ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವಂತೆ, ದುಡಿಯುವ ಜನರ ಶೋಷಣೆ ತಪ್ಪಿಸಲು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು ಆಗ್ರಹಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ದೇಶಾದ್ಯಂತ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರೈತ, ಕೂಲಿಕಾರ, ಕಾರ್ಮಿಕರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವಂತೆ, ದುಡಿಯುವ ಜನರ ಶೋಷಣೆ ತಪ್ಪಿಸಲು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು ಆಗ್ರಹಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶದಲ್ಲಿ ಬಡತನ ರೇಖೆಗಿಂತ ಸುಮಾರು 80 ಕೋಟಿ ಜನರು ಇದ್ದಾರೆ. ಕಳೆದ 2014 ಮೇಗೆ ಹೋಲಿಸಿದರೆ 2023ರಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಶೇಕಡಾ 30ರಷ್ಟು ಹೆಚ್ಚಾಗಿದೆ. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಕೂಡ ಇಂಧನ ಉತ್ಪಾದನೆ, ವಿತರಣೆ ಖಾಸಗಿ ಕಂಪೆನಿಗಳ ಪಾಲಾಗಿರುವ ಫಲವಾಗಿ ಇಂಧನದ ಮೇಲೆ ವಿಪರೀತ ತೆರಿಗೆ ವಿಧಿಸಿದ್ದರ ಪರಿಣಾಮ ಡೀಸೆಲ್, ಪೆಟ್ರೋಲ್ ಬೆಲೆಗಳು ಹೆಚ್ಚಳವಾಗಿ ಅಗತ್ಯ ವಸ್ತುಗಳ ಬೆಲೆಏರಿಕೆಗೂ ಕಾರಣವಾಗಿವೆ ಎಂದರು.

ಸಂವಿಧಾನದ ಆಶಯಗಳ ಪರವಾಗಿ ನಡೆಯುತ್ತಿರುವ ದೇಶಪ್ರೇಮಿ ಹೋರಾಟದಲ್ಲಿ ಕಾರ್ಮಿಕರು, ರೈತರು, ಕೃಷಿ, ಕೂಲಿಆರರು ಮತ್ತು ಇತರೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗೌರಮ್ಮ ಪಾಟೀಲ್, ಎಂ.ಬಿ. ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ್ ಕಠಾರೆ, ನಾಗಯ್ಯಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.