ರೈತರ ಹಸು ಮತ್ತು ಕರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಮುಂದಾಗುತ್ತಿಲ್ಲವೆಂದು ರೈತರು ಪಶು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಂಡ ಘಟನೆ ಪಟ್ಟಣದ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ನಡೆಯಿತು.
ಸವಣೂರು: ರೈತರ ಹಸು ಮತ್ತು ಕರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಮುಂದಾಗುತ್ತಿಲ್ಲವೆಂದು ರೈತರು ಪಶು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಂಡ ಘಟನೆ ಪಟ್ಟಣದ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ನಡೆಯಿತು.
ರೈತ ಸಂಘಟನೆಯವರು ಮಾತನಾಡಿ, ಸ್ವಲ್ಪ ದಿನಗಳ ಹಿಂದೆ ರೈತರ ಜೊತೆ ಆಗಮಿಸಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಆಸ್ಪತ್ರೆಗೆ ಆಹ್ವಾನಿಸಿ ಈ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಅಧಿಕಾರಿಗಳ ನ್ಯೂನತೆಗಳ ಕುರಿತು ಅರ್ಜಿ ಸಲ್ಲಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ರೈತರ ಹಾಗೂ ಇತರೆ ಸಾರ್ವಜನಿಕರ ಜಾನುವಾರುಗಳ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಆದರೆ, ಇಂದು ಸಹ ರೈತರು ಆಸ್ಪತ್ರೆಗೆ ಜಾನುವಾರುಗಳನ್ನು ತಂದರೆ ಸಿಬ್ಬಂದಿ ಸೂಕ್ತ ಚಿಕಿತ್ಸೆ ಹಾಗೂ ಔಷಧಿ ಉಪಚಾರ ನೀಡುತ್ತಿಲ್ಲ. ಆದ್ದರಿಂದ, ಸ್ಥಳಕ್ಕೆ ತಹಸೀಲ್ದಾರ್ ಅವರು ಆಗಮಿಸಿ ತಮ್ಮ ಅಹವಾಲು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು.ಪಶುಪಾಲನಾ ಇಲಾಖೆ ಎಡಿ ಡಾ. ನೀಲಕಂಠ ಹವಳದ ಪ್ರತಿಭಟನಾಕಾರೊಂದಿಗೆ ಮಾತನಾಡಲು ಮುಂದಾದರು. ತಕ್ಷಣ ಮತ್ತಷ್ಟೂ ಆಕ್ರೋಶಗೊಂಡ ಪ್ರತಿಭನಾಕಾರರು, ಸರ್ಕಾರದಿಂದ ಜಾನುವಾರುಗಳಿಗೆ ನೀಡುವ ಔಷಧಿಗಳನ್ನು ಯಾಕೆ ತೆಗೆದು ಇಟ್ಟುಕೊಂಡು ಹೊರಗೆ ಬರೆದುಕೊಡುತ್ತೀರಿ, ನಿಮ್ಮ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರುವದಿಲ್ಲ, ನೀವು, ಇರುವದಿಲ್ಲ, ಯಾರಿಗೆ ಕೇಳಬೇಕು ನಾವು ಎಂದು ತರಾಟೆಗೆ ತೆಗೆದುಕೊಂಡರು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರವಿ ಕೊರವರ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಆಸ್ಪತ್ರೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಾಕಿತು ಮಾಡಲಾಗುವುದು. ರೈತರು ಸಮಯ ಅವಕಾಶವನ್ನು ನೀಡಬೇಕು. ಮುಂದಿನ ದಿನಮಾನದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.ಪ್ರತಿಭಟನಾಕಾರರು ಮುಂದಿನ ೮ ದಿನಗಳವರೆಗೆ ಕಾಯ್ದು ನೋಡಲಾಗುವುದು. ಇದೇ ವ್ಯವಸ್ಥೆ ಮುಂದುವರೆದಲ್ಲಿ ಕಂದಾಯ ಇಲಾಖೆ ಎದುರಲ್ಲಿ ಜಾನುವಾರು ಸಮೇತ ಆಗಮಿಸಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ, ಪ್ರತಿಭಟನೆಯನ್ನು ವಾಪಸ್ ಪಡೆದರು.ರೈತರಾದ ಗಣೇಶ ಗಾಣಗೇರ, ವೀರನಗೌಡ ಪಾಟೀಲ, ಸಂತೋಷ ಗಾಡದ, ಈರಣ್ಣ ಕಾಳಶೆಟ್ಟಿ, ಬಸನಗೌಡ ಪಾಟೀಲ, ಭರಮನಗೌಡ ಮುದಿಗೌಡ್ರ, ಬಸನಗೌಡ ಪಾಟೀಲ, ಅಜೀತ್ ಗಾಣಗೇರ ಹಾಗೂ ಇತರರು ಇದ್ದರು.