ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬಿನ ದರ ನಿಗದಿ ಹಾಗೂ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಜಾರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ನಾಲ್ಕನೇ ದಿನವೂ ಮುಂದುವರಿದಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸರ್ಕಾರ ಟನ್ಗೆ ₹5,400 ದರ ನಿಗದಿಪಡಿಸಬೇಕು ಹಾಗೂ ಪ್ರತಿ ಟನ್ಗೆ ₹1,000 ಪ್ರೋತ್ಸಾಹಧನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ, ಬೇಡಿಕೆಗಳಿಗೆ ಸ್ಪಂದಿಸದ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಗೋದಾಮುಗಳಿಗೆ ಮುತ್ತಿಗೆ ಹಾಕಿ ಬೀಗ ಜಡಿಯುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬಿನ ದರ ನಿಗದಿ ಹಾಗೂ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಜಾರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ನಾಲ್ಕನೇ ದಿನವೂ ಮುಂದುವರಿದಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸರ್ಕಾರ ಟನ್ಗೆ ₹5,400 ದರ ನಿಗದಿಪಡಿಸಬೇಕು ಹಾಗೂ ಪ್ರತಿ ಟನ್ಗೆ ₹1,000 ಪ್ರೋತ್ಸಾಹಧನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ, ಬೇಡಿಕೆಗಳಿಗೆ ಸ್ಪಂದಿಸದ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಗೋದಾಮುಗಳಿಗೆ ಮುತ್ತಿಗೆ ಹಾಕಿ ಬೀಗ ಜಡಿಯುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ.ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರೂ ಯಾವುದೇ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಹೀಗಾಗಿ ರೈತರು ಪ್ರತಿಭಟನೆ ಮುಂದುವರಿಸಿದ್ದು, ಸರ್ಕಾರದ ನಿರ್ಧಾರಕ್ಕಾಗಿ ಗುರುವಾರವೂ ಇಡೀ ದಿನ ಕಾಯಲಿದ್ದಾರೆ. ಈಗಾಗಲೇ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿರುವ ರೈತರು, ಸಂಜೆಯೊಳಗೆ ಬೇಡಿಕೆ ಈಡೇರದಿದ್ದರೆ ರೈತರ ಹೋರಾಟದ ಸಮಿತಿ ಸಭೆ ನಡೆಸಿ ಕರ್ನಾಟಕ ಬಂದ್ಗೆ ಕರೆ ನೀಡುವ ಕುರಿತು ಚಿಂತನೆ ನಡೆಸಲಿದ್ದಾರೆ.ಸಕ್ಕರೆ ಗೋದಾಮುಗಳಿಗೆ ಮುತ್ತಿಗೆ:
ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ಹೆಚ್ಚಿಸುವವರೆಗೆ ಕಾರ್ಖಾನೆಗಳು ಸಕ್ಕರೆ ಮಾರಾಟ ಮಾಡಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ನೇತೃತ್ವದಲ್ಲಿ ರೈತರು ವಿವಿಧ ಕಾರ್ಖಾನೆಗಳಿಗೆ ತೆರಳಿ ಮನವಿ ಸಲ್ಲಿಸುತ್ತಿದ್ದಾರೆ.ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿರುವ ಕತ್ತಿ ಕುಟುಂಬದ ಒಡೆತನದ ಉಗಾರ ಶುಗರ್ಸ್ ಕಾರ್ಖಾನೆಯ ಸಕ್ಕರೆ ಗೋದಾಮಿಗೆ ರೈತರು ಮುತ್ತಿಗೆ ಹಾಕಿ ಬೀಗ ಜಡಿದರು. ಸಕ್ಕರೆ ಎಂಎಸ್ಪಿ ಹೆಚ್ಚಿಸುವವರೆಗೆ ಮಾರಾಟ ಮಾಡಬಾರದು. ಬೇಡಿಕೆ ಕಡೆಗಣಿಸಿ ಸಕ್ಕರೆ ಮಾರಾಟ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ಮಾಜಿ ಸಂಸದ ರಮೇಶ ಕತ್ತಿ ಒಡೆತನದ ವಿಶ್ವರಾಜ್ ಶುಗರ್ಸ್ ಕಾರ್ಖಾನೆಯ ಸಕ್ಕರೆ ಗೋದಾಮಿಗೂ ರೈತರು ಮುತ್ತಿಗೆ ಹಾಕಿದರು. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸುವವರೆಗೆ ಗೋದಾಮಿನಿಂದ ಸಕ್ಕರೆ ಹೊರಕ್ಕೆ ಸಾಗಿಸಬಾರದು ಎಂದು ಆಗ್ರಹಿಸಿದರು.ಸತೀಶ ಶುಗರ್ಸ್ಗೂ ರೈತರ ದಂಡು:ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಒಡೆತನದ ಸತೀಶ ಶುಗರ್ಸ್ ಕಾರ್ಖಾನೆಯ ಗೋದಾಮಿಗೂ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ರೈತರು ಭೇಟಿ ನೀಡಿ, ಸಕ್ಕರೆ ಮಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿರುವ ಕಾರ್ಖಾನೆಯ ಗೋದಾಮಿಗೆ ಭೇಟಿ ನೀಡಿದ ರೈತರು, ಅ.31ರಂದು ದೊಡ್ಡ ಮಟ್ಟದ ಹೋರಾಟ ಆಯೋಜಿಸಲಾಗಿದೆ. ಅಷ್ಟರೊಳಗೆ ಕಬ್ಬಿನ ದರದ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೆ ಗೋದಾಮಿನಿಂದ ಸಕ್ಕರೆ ಹೊರಕ್ಕೆ ಸಾಗಿಸಬಾರದು ಎಂದು ಒತ್ತಾಯಿಸಿದರು. ರೈತರ ಮನವಿಗೆ ಕಾರ್ಖಾನೆಯ ಸಿಬ್ಬಂದಿ ಸ್ಪಂದಿಸಿದರು ಎಂದು ರೈತ ಮುಖಂಡರು ತಿಳಿಸಿದರು.ಅ.31ಕ್ಕೆ ಅಂತಿಮ ಗಡುವು:
ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಇನ್ನೂ ಸ್ಪಷ್ಟ ಪರಿಹಾರ ನೀಡಿಲ್ಲ. ರೈತರು ಕೇವಲ ಭರವಸೆಗಳಿಂದ ತೃಪ್ತರಾಗುವುದಿಲ್ಲ. ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅ.31ರೊಳಗೆ ಕಬ್ಬಿನ ದರ ಹಾಗೂ ರೈತರ ಬೇಡಿಕೆಗಳ ಕುರಿತು ಸ್ಪಷ್ಟ ಘೋಷಣೆ ಮಾಡಬೇಕು. ಇಲ್ಲವಾದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಚುನಪ್ಪ ಪೂಜೇರಿ ಎಚ್ಚರಿಕೆ ನೀಡಿದ್ದಾರೆ.
ಕಬ್ಬಿನ ದರ ನಿಗದಿ, ರಾಜ್ಯದ ಪ್ರೋತ್ಸಾಹಧನ ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳದ ಬೇಡಿಕೆಗಳೊಂದಿಗೆ ಆರಂಭವಾದ ಹೋರಾಟ ಇದೀಗ ಸಕ್ಕರೆ ಗೋದಾಮುಗಳ ಮುತ್ತಿಗೆವರೆಗೂ ವಿಸ್ತರಿಸಿದೆ. ಸರ್ಕಾರದ ಮುಂದಿನ ನಿರ್ಧಾರಕ್ಕಾಗಿ ರೈತರು ಕಾಯುತ್ತಿದ್ದು, ಬೇಡಿಕೆ ಈಡೇರದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆಯಿದೆ.