ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ನೋಂಗ್ಝಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು, ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಬೆಳೆಗಳ ವೀಕ್ಷಣೆಗೆ ಆಗಮಿಸಿದ್ದ ವೇಳೆ ರೈತರು ತಮ್ಮ ನೋವನ್ನು ತೋಡಿಕೊಂಡರು
ಹೂವಿನಹಡಗಲಿ: ಮಳೆರಾಯನ ಮುನಿಸಿಗೆ ನಮ್ ಬದುಕು ಮೂರಾಬಟ್ಟಿಯಾಗಿ ಹೋಗೈತಿ, ಬಿತ್ತನೆಗೆ ಮಾಡಿದ ಸಾಲ ಹ್ಯಾಂಗ್ ತೀರಿಸಬೇಕಂತ ದಿಕ್ಕೇ ಕಾಣುತ್ತಿಲ್ಲ, ಇಂತಹ ಹೊತ್ತಿನ್ಯಾಗ ಬೆಳೆ ವಿಮೆ ಕಟ್ಟಲು ಕಾಸಿಲ್ಲ, ಕೈಗೆ ಕೆಲಸ ಇಲ್ಲ ಗುಳೇ ಹೋಗುವ ಪರಿಸ್ಥಿತಿ ಬಂದೈತಿ...
ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ನೋಂಗ್ಝಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು, ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಬೆಳೆಗಳ ವೀಕ್ಷಣೆಗೆ ಆಗಮಿಸಿದ್ದ ವೇಳೆ ರೈತರು ತಮ್ಮ ನೋವನ್ನು ತೋಡಿಕೊಂಡ ಪರಿಯಿದು.ಮುಂಗಾರು ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ್ದೆವು, ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇವು. ಆದರೆ, ಮಳೆ ಮುನಿಸು ನಮ್ಮ ಬದುಕನ್ನೇ ಕಿತ್ತುಕೊಂಡಿದೆ. ಬೆಳೆ ನಷ್ಟವಾಗಿ ಬರ ಆವರಿಸಿದೆ. ಆದ್ದರಿಂದ ರೈತರ ಸಂಕಷ್ಟ ಆಲಿಸಿದ್ದೀರಿ, ಸೂಕ್ತ ಪರಿಹಾರ ನೀಡುವ ಜತೆಗೆ ಸಾಲ ಮನ್ನಾ ಮಾಡಬೇಕು ಎಂದು ರೈತರು ಮನವಿ ಮಾಡಿಕೊಂಡರು.
ಕೆಂಚಮ್ಮನಹಳ್ಳಿ ಗ್ರಾಮದ ಎಂ. ಕೊಟ್ರೇಶಪ್ಪ, ಎಚ್.ಎಂ. ಸೌಭಾಗ್ಯಮ್ಮ ಜಮೀನಿನಲ್ಲಿ ಬಿತ್ತನೆಯಾಗಿದ್ದ ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದರು.ಬಿತ್ತನೆ ಮಾಡಿದ ಬೆಳೆಗೆ ನೀರಿಲ್ಲದೇ ಒಣಗಿ ಹೋಗಿವೆ. ಈಗ ಮಳೆ ಬಂದರೂ ಬೆಳೆ ಬರಲು ಸಾಧ್ಯವಿಲ್ಲ. ಸೂರ್ಯಕಾಂತಿ ಬೆಳೆ ಸಂಪೂರ್ಣ ಒಣಗಿರುವ ಬಗ್ಗೆ ಅಳಲು ತೊಡಿಕೊಂಡರು.
ರೈತರೊಂದಿಗೆ ಬೆಳೆ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಮಳೆಯ ಅಭಾವದ ಸಂಧರ್ಭದಲ್ಲಿ ಬೆಳೆ ವಿಮೆ ಮಾಡಿಸಲು ತಿಳಿಸಿದಾಗ, ಕೈಯಲ್ಲಿ ಕಾಸಿಲ್ಲ ಕೂಲಿ ನಾಲಿ ಮಾಡಿ ಬೆಳೆ ವಿಮೆ ತುಂಬುವಂತಹ ಸ್ಥಿತಿ ಬಂದಿದೆ. ಅತ್ತ ಬೆಳೆ ವಿಮೆ ತುಂಬಿದರೆ ಇತ್ತ ಹೊಟ್ಟಿಗೆ ತಣ್ಣೀರು ಬಟ್ಟಿಯೇ ಗತಿಯಾಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಡಿಸಿ ಬಳಿ ರೈತರು ಮನವಿ ಮಾಡಿಕೊಂಡರು.ಬೆಳೆ ವೀಕ್ಷಣೆ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ ಅವರು ಜಿಲ್ಲಾಧಿಕಾರಿಗಳಿಗೆ ರೈತರ ನೋವು ಮತ್ತು ಬೆಳೆ ಹಾನಿ ಕುರಿತು ಮಾಹಿತಿ ನೀಡಿ, ತಾಲೂಕಿನ ರೈತರಿಗೆ ಬೆಳೆವಿಮೆ ಸಿಗುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.ಈ ವೇಳೆ ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಡಿ.ಟಿ. ಮಂಜುನಾಥ, ಉಪ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ಇವರು, ರೈತರ ಬೆಳೆವಿಮೆ ಕುರಿತಾದ ಸಂದೇಹಗಳಿಗೆ ಉತ್ತರಿಸಿ, ಬೆಳೆ ಸಾಲ ಹೊಂದಿದ ರೈತರು ತಮಗೆ ಸಾಲ ನೀಡಿರುವ ಬ್ಯಾಂಕ್‌ಗಳಲ್ಲಿ ಬೆಳೆ ವಿಮೆ ಮಾಡಿಸಬೇಕು ಮತ್ತು ಸಾಲ ಇಲ್ಲದ ರೈತರು, ಸಾಲ ಇಲ್ಲದಿರುವ ಬಗ್ಗೆ ಧೃಢೀಕರಣ ನೀಡಿ, ಹತ್ತಿರದ ಗ್ರಾಮ ಒನ್, ಸಿಎಸ್ಸಿಗಳಲ್ಲಿ ವಿಮೆ ತುಂಬಬೇಕೆಂದು ತಿಳಿಸಿದರು.
ಹರಪನಹಳ್ಳಿಯ ಸಹಾಯಕ ಆಯುಕ್ತ ಸುರೇಶಕುಮಾರ, ತಹಸೀಲ್ದಾರ್ ಕೆ.ಎಂ. ಗುರು ಬಸವರಾಜ್, ತಾಪಂ ಇಒ ಜಿ. ಪರಮೇಶ್ವರ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಕೆ.ಟಿ. ಮಂಜುನಾಥ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜ್, ಕೃಷಿ ಅಧಿಕಾರಿ ಪ್ರದೀಪ್ ಕುಮಾರ್, ನೂರಾರು ರೈತರು ಉಪಸ್ಥಿತರಿದ್ದರು.