ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಆಧುನಿಕ ಕೃಷಿ ಪದ್ಧತಿಯಲ್ಲಿ ರೈತರು ಸಾಮೂಹಿಕ ಕೃಷಿ ಮಾಡುವುದರಿಂದ ಆರ್ಥಿಕವಾಗಿ ಬದುಕನ್ನು ಸದೃಢಗೊಳಿಸಿಕೊಳ್ಳಬಹುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ತಾಲೂಕಿನ ಬಿಜಿಪುರ ವ್ಯಾಪ್ತಿಯಲ್ಲಿ ಹನಿನೀರಾವರಿ ಯೋಜನೆಯಡಿ ಬೆಳೆದಿರುವ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ ಹಾಗೂ ಫಲಾನುಭವಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹನಿ ಮತ್ತು ತುಂತುರು ನೀರಾವರಿಯಲ್ಲಿ ಬೆಳೆ ಬೆಳೆಯುವುದು, ರೈತರ ಸಾಮೂಹಿಕ ಪಾತ್ರ. ವಾಣಿಜ್ಯ ಬೆಳೆಗಳ ಕಡೆಗೆ ರೈತರನ್ನು ಆಕರ್ಷಿಸುವುದು, ಒಂದೇ ಬೆಳೆ ಬೆಳೆಯುವುದರಿಂದ ಸಂಸ್ಕರಣಾ ಘಟಕಗಳು ಸ್ಥಾಪನೆಗೊಂಡು ಕೃಷಿ ಉತ್ಪನ್ನಗಳ ಮೌಲ್ಯ ವೃದ್ಧಿಯಾಗುತ್ತದೆ. ಜೊತೆಗೆ ರೈತರ ಆದಾಯ ಹೆಚ್ಚುತ್ತದೆ. ಇದು ಹನಿ-ತುಂತುರು ನೀರಾವರಿ ಯೋಜನೆಯ ಮೂಲೋದ್ದೇಶವಾಗಿದೆ ಎಂದರು.
ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಾಗ ಗೊಂದಲಗಳು ಮೂಡುವುದು ಸಹಜ. ಹನಿ ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ. ಇದೊಂದು ಮಹತ್ವಾಕಾಂಕ್ಷಿ ಯೋಜನೆ. ಆರ್ಥಿಕವಾಗಿ ರೈತರ ಬದುಕನ್ನು ಪರಿವರ್ತಿಸುವ ಯೋಜನೆಯಾಗಿದೆ. ವಿವಿಧ ಬೆಳೆಗಳನ್ನು ಸಾಮೂಹಿಕ ಕೃಷಿಯಲ್ಲಿ ಬೆಳೆದು ಆದಾಯವನ್ನು ಗಳಿಸಿಕೊಳ್ಳುವುದಕ್ಕೆ ಉತ್ತಮ ಸದಾವಕಾಶ ದೊರಕಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ರೈತರಲ್ಲಿ ಮನವಿ ಮಾಡಿದರು.ಮೊದಲ ಅವಧಿಯಲ್ಲಿ 3 ತಿಂಗಳು, 6 ತಿಂಗಳು ಅಥವಾ 10 ತಿಂಗಳ ಬೆಳೆ ಬೆಳೆಯಬೇಕೇ ಎಂಬುದನ್ನು ಯೋಚನೆ ಮಾಡಿ. ಇದಕ್ಕಾಗಿ ನೋಡಲ್ ಸೊಸೈಟಿ ತೆರೆಯಲಾಗುವುದು. ಅಲ್ಲಿ ಬೆಳೆ ವಿಚಾರವಾಗಿ ಬಹುಮತದಿಂದ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು. ಯಾವ ಬೆಳೆ ಬೆಳೆದರೆ ಸೂಕ್ತ. ಯಾವ ಬೆಳೆಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಮನಗಂಡು ಅಂತಹ ಬೆಳೆ ಬೆಳೆಯಲಾಗುತ್ತದೆ. ಜೊತೆಗೆ ನೇರವಾಗಿ ಮಾರುಕಟ್ಟೆ ಪ್ರವೇಶಿಸಲಾಗುವುದು. ಬೆಳೆ ಬೆಳೆಯಲು ಆದ ಖರ್ಚನ್ನು ಕಳೆದು ಉಳಿಕೆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಪಾವತಿಸಸಲಾಗುವುದು ಎಂದರು.
ಈಗಾಗಲೇ ಕುಂದೂರಿಗೆ ಒಂದು ಸಂಸ್ಕರಣಾ ಘಟಕ ಬಂದಿದೆ. ಆ ಕಂಪನಿಯವರು 2 ಸಾವಿರ ಎಕರೆಯಲ್ಲಿ ಬೆಳೆಯುತ್ತಿರುವ ಟಮೋಟೋ ಬೆಳೆಯನ್ನು ಕೊಂಡುಕೊಳ್ಳುತ್ತಿದ್ದಾರೆ. ಮನೆ ಬಾಗಿಲಿಗೆ ಬಂದು ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿರುವುದರಿಂದ ಸಾಗಣೆ ವೆಚ್ಚವೂ ತಪ್ಪಲಿದೆ ಎಂದರು.ಬಿಜಿಪುರ ಹೋಬಳಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಮಾದರಿಯಾಗಬೇಕೆಂಬುವುದು ನನ್ನ ಕನಸಾಗಿದೆ. ಮಳೆಯಾಶ್ರಿತ ಪ್ರದೇಶಕ್ಕೆ ಹನಿ ನೀರಾವರಿ ಅಳವಡಿಸಿ ಹಸಿರು ಪ್ರದೇಶವನ್ನಾಗಿ ಮಾಡಬೇಕೆಂಬ ಆಕಾಂಕ್ಷೆಯೊಂದಿಗೆ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಈಗಾಗಲೇ ಹೋಬಳಿಯ ಹಲವೆಡೆ ಈ ಯೋಜನೆಯಡಿ ನಡೆಸಿರುವ ಪ್ರಯೋಗ ಯಶಸ್ಸನ್ನು ಕಂಡಿವೆ. ಹಲವಾರು ರೈತರು ಆಕರ್ಷಿತರಾಗಿದ್ದಾರೆ. ಹೋಬಳಿಯ ಎಲ್ಲಾ ರೈತರು ಈ ಸಾಮೂಹಿಕ ಬೆಳೆ ಪದ್ಧತಿಗೆ ಒಳಪಡಬೇಕೆಂಬುದು ನನ್ನ ಆಶಯವಾಗಿದೆ ಎಂದರು.
ಸಾವಯವ ಕೃಷಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಬಿ.ಪುರ ಹೋಬಳಿಯ ಜಮೀನುಗಳು ಯೋಗ್ಯವಾಗಿದ್ದು, ರೈತರ ಹೆಚ್ಚಿನ ಪ್ರೋತ್ಸಾಹದೊಂದಿಗೆ ಸಾಮೂಹಿಕ ಏಕ ಪದ್ದತಿ ಬೆಳೆ ಬೆಳೆದರೇ ದೊಡ್ಡ ಕಂಪನಿಗಳು ಮುಂದೆ ಬಂದು ನಿಗಧಿಪಡಿಸಿದ ಬೆಲೆಯಲ್ಲಿ ಬೆಳೆಯನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ, ಸ್ಥಳೀಯವಾಗಿ ಕಾರ್ಖಾನೆಗಳು ತಲೆ ಎತ್ತಿದರೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ ಎಂದರು.ಸಾವಯವ ಕೃಷಿ ವಿಜ್ಞಾನಿ ಪ್ರಕಾಶ್ ಮಾತನಾಡಿ, ಮಳೆ ಆಶ್ರಿತ ಪ್ರದೇಶದಲ್ಲಿ ಪ್ರತಿಯೊಬ್ಬ ರೈತನ ಜೀವನವನ್ನು ಕಟ್ಟಿಕೊಡುವ ಯೋಚನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರೈತರ ಸ್ಪಂದನೆ ಬಹಳ ಮುಖ್ಯವಾಗಿದೆ, ಹನಿ ನೀರಾವರಿ ಪದ್ಧತಿಯಲ್ಲಿ ತಕ್ಷಣದ ಆದಾಯ, ಮಧ್ಯಮ ಆದಾಯ ಹಾಗೂ ದೀರ್ಘಾವಧಿ ಆದಾಯ ಕಾಣಬಹುದು ಎಂದು ನುಡಿದರು.
ಕೃಷಿ ಇಲಾಖೆ ಜಂಟಿ ನಿರ್ಧೇಶಕ ಅಶೋಕ್, ಸಹಾಯ ನಿರ್ದೇಶಕ ಪಿ.ಎಸ್ ದೀಪಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶಾಂತರಾಜು ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು.