ಸಾರಾಂಶ
ಹುಬ್ಬಳ್ಳಿ: ಕರಸೇವೆ ಮುಗಿಸಿಕೊಂಡು ಜೀವಂತವಾಗಿ ಮರಳಿ ಬರುತ್ತೇವೆ ಎಂಬ ಗ್ಯಾರಂಟಿಯೇ ನನಗಿರಲಿಲ್ಲ. ಕರಸೇವೆಗೆ ಹೋಗುವಾಗಲೇ ಮರಳಿ ಬಂದರೆ ಖುಷಿ ಪಡಿ; ಅಲ್ಲೇ ಸತ್ತರೆ ದುಃಖಿಸಬೇಡಿ ಎಂದು ಮನೆಯಲ್ಲಿ ಹೇಳಿಯೇ ಹೋಗಿದ್ದೆ. ಶ್ರೀರಾಮನ ಕೃಪೆಯಿಂದ ಸುರಕ್ಷಿತವಾಗಿ ಮರಳಿ ಬಂದೆ..!
ಇದು 1992ರಲ್ಲಿ ಹುಬ್ಬಳ್ಳಿಯಿಂದ ಕರಸೇವೆಗೆ ತೆರಳಿದ್ದ ತಂಡದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅಶೋಕ ಕಾಟವೆ ಹೇಳುವ ಮಾತು. ಮರಳಿ ಬರುವಾಗ ಪೆಟ್ರೋಲ್ ಬಾಂಬ್ ಸಿಡಿಸುತ್ತಿದ್ದರು. ದೊಡ್ಡ ದೊಡ್ಡ ಸೈಜ್‌ಗಲ್ಲುಗಳ ತೂರಾಟ ನಿರಂತರವಾಗಿತ್ತು ಎಂದು ಕನ್ನಡಪ್ರಭದೊಂದಿಗೆ ಮಾತನಾಡುತ್ತಾ ಹಳೆ ನೆನಪುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ಕರಸೇವೆಗೆ ಕರೆ ಬಂದ ವೇಳೆ ಹುಬ್ಬಳ್ಳಿಯಿಂದ ಯಾರ ನೇತೃತ್ವದಲ್ಲಿ ಸೇವಕರನ್ನು ಕರೆದುಕೊಂಡು ಹೋಗಬೇಕೆಂಬ ಯೋಚನೆ ಹಿರಿಯರಲ್ಲಿ ಉಂಟಾಗುತ್ತದೆ. ಆಗ ಅಶೋಕ ಕಾಟವೆ ಹೆಗಲಿಗೆ ನೇತೃತ್ವದ ಜವಾಬ್ದಾರಿ ವಹಿಸುತ್ತಾರೆ. ಹೀಗಾಗಿ, 50ಕ್ಕೂ ಹೆಚ್ಚು ಜನರು ಅಶೋಕ ಕಾಟವೆ ಹಾಗೂ ರಂಗಾಬದ್ದಿ ನೇತೃತ್ವದಲ್ಲಿ ಕರಸೇವೆಗೆಂದು ಹೋಗುತ್ತಾರೆ.
ಬರೀ ತಾವಷ್ಟೇ ಕರಸೇವೆಗೆ ಹೋಗುವುದಲ್ಲ. ತಾವು ಕರೆದುಕೊಂಡು ಹೋದ ಎಲ್ಲರನ್ನು ಸಂಭಾಳಿಸಿಕೊಂಡು ಮರಳಿ ಕರೆತರುವವರೆಗೂ ಇವರದೇ ಜವಾಬ್ದಾರಿ ಇತ್ತು.ರೈಲಿನಲ್ಲಿ ಕುಳಿತುಕೊಳ್ಳಲು ಸರಿಯಾದ ಜಾಗೆ ಇರಲಿಲ್ಲ. ಹಾಗೋ ಹೀಗೋ ಮಾಡಿಕೊಂಡು ಅಯೋಧ್ಯೆಗೆ ತೆರಳಿದ್ದೆವು. ಅಲ್ಲಿ ನಮಗಾಗಿ ಪ್ರತ್ಯೇಕ ಟೆಂಟ್ ಇತ್ತು. ಅಲ್ಲೇ ಎಲ್ಲರನ್ನು ಕರೆದುಕೊಂಡು ಎಲ್ಲರಿಗೂ ಹಿರಿಯರು ತಿಳಿಸಿದಂತೆ ತರಬೇತಿ ನೀಡುತ್ತಿದ್ದೆವು. ಎಂಟು ದಿನ ಮುಂಚಿತವಾಗಿಯೇ ಹೋಗಿದ್ದೆವು. ಊಟ, ಉಪಚಾರದ ಸಮಸ್ಯೆಯಾಗಲಿಲ್ಲ. ಮುಂದೆ ಡಿ. 6ರಂದು ಬಾಬರಿ ಮಸೀದಿ ಕೆಡವಲಾಯಿತು. ಗುಮ್ಮಟದ ಮೇಲೆ ಮೊದಲಿಗೆ ಹಾರಾಡಿದ್ದು ನಮ್ಮ ಹುಬ್ಬಳ್ಳಿಯ ಭಗವಾದ್ವಜ. ನಮ್ಮೊಂದಿಗೆ ಬಂದಿದ್ದ ಗುರುಸಿದ್ದಪ್ಪ ಶೆಲ್ಲಿಕೇರಿ ಆ ದ್ವಜವನ್ನು ಹಾರಿಸಿದ್ದ. ಮುಂದೆ ಮರುದಿನ ರಾಮಲಲ್ಲಾನ ಪೂಜೆ ಮುಗಿಯಿತು. ವಿಪರೀತ ನೂಕು ನುಗ್ಗಾಟ, ತಳ್ಳಾಟ ಇತ್ತು. ಹಾಗೋ ಹೀಗೋ ಮಾಡಿಕೊಂಡು ಕರಸೇವೆ ಯಶಸ್ವಿಯಾಗಿತ್ತು.
ಪೆಟ್ರೋಲ್ ಬಾಂಬ್, ಕಲ್ಲು ತೂರಾಟ:ಮರುದಿನ ಅಲ್ಲಿಂದ ಎಲ್ಲರೂ ಹೊರಟೆವು. ರೈಲಿನಲ್ಲಿ ಕುಳಿತುಕೊಳ್ಳುವುದು ಒತ್ತಟ್ಟಿಗಿರಲಿ. ನಿಂತುಕೊಳ್ಳಲು ಜಾಗೆ ಇರಲಿಲ್ಲ. ಎಷ್ಟೋ ಜನ ರೈಲಿನ ಮೇಲೆಯೇ ಕುಳಿತು ಪ್ರಯಾಣಿಸಿದ್ದುಂಟು.
ಮರಳಿ ಬರುವಾಗ ಅಕ್ಷರಶಃ ಜೀವ ಕೈಯಲ್ಲೇ ಹಿಡಿದುಕೊಂಡು ಮರಳಿದೆವು. ಪ್ರತಿ ನಿಲ್ದಾಣದಲ್ಲೂ ನಮ್ಮ ಮೇಲೆ ದೊಡ್ಡ ದೊಡ್ಡ ಕಲ್ಲುಗಳ ತೂರಾಟ ನಿರಂತರವಾಗಿ ನಡೆಯುತ್ತಲೇ ಇತ್ತು. ಒಬ್ಬರ ತಲೆ ಮೇಲೆ ಬಿದ್ದರೆ ಅಲ್ಲೇ ಸತ್ತೇ ಹೋಗಬೇಕು ಅಷ್ಟೊಂದು ದೊಡ್ಡ ಕಲ್ಲುಗಳಿರುತ್ತಿದ್ದವು. ಒಂದೆರಡು ಕಡೆಗಳಲ್ಲಿ ಬಾಟಲ್‌ನಲ್ಲಿ ಪೆಟ್ರೋಲ್ ತುಂಬಿ ಪೆಟ್ರೋ ಬಾಂಬ್ ತಯಾರಿಸಿ ಎಸೆಯುತ್ತಿದ್ದುಂಟು. ಮುಂದೆ ಕೆಲ ನಿಲ್ದಾಣಗಳಲ್ಲಿ ರೈಲು ನಿಂತ ವೇಳೆ ನಾವು ಕಲ್ಲುಗಳನ್ನು ಶೇಖರಿಸಿಕೊಂಡೆವು. ಅವರು ಕಲ್ಲೆಸೆದಾಗ ನಾವು ಪ್ರತಿದಾಳಿ ಮಾಡಲು ಶುರು ಮಾಡಿದೆವು ಎಂದು ಮೆಲಕು ಹಾಕುತ್ತಾರೆ.ನಿಜ ಹೇಳಬೇಕೆಂದರೆ ಜೀವಂತ ನಮ್ಮ ಮನೆ ಮುಟ್ಟುತ್ತೇವೆ ಎಂದುಕೊಂಡಿರಲಿಲ್ಲ. ಹೀಗಾಗಿ, ಮನೆಯಲ್ಲಿ ನಾನು ಜೀವಂತ ಬಂದರೆ ಖುಷಿ ಪಡಿ; ಆದರೆ ಒಂದು ವೇಳೆ ಬರದಿದ್ದರೆ ದುಃಖಿಸಬೇಡಿ. ರಾಮನ ಸೇವೆಯಲ್ಲಿ ಹುತಾತ್ಮನಾದೆ ಎಂದು ತಿಳಿದುಕೊಳ್ಳಿ ಎಂದು ಹೇಳಿದ್ದೆ. ಮೊದಲಿಗೆ ತಂದೆ ತಾಯಿ ಇಬ್ಬರು ಕಣ್ಣೀರು ಸುರಿಸಿದ್ದರು.
ಆದರೆ ಆ ರಾಮನ ಕೃಪೆ, ನಾನೂ ಸೇರಿದಂತೆ ನನ್ನೊಂದಿಗೆ ಕರಸೇವೆಗೆ ಹೋಗಿದ್ದ ಯಾರೊಬ್ಬರಿಗೂ ಏನೂ ಸಮಸ್ಯೆಯಾಗಲಿಲ್ಲ. ಇದೆಲ್ಲವೂ ಆ ಪ್ರಭುವಿನ ಲೀಲೆಯೇ ಸರಿ. ಇದೀಗ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ನಿಜಕ್ಕೂ ನಮ್ಮ ಹೋರಾಟದ ಬಗ್ಗೆ ಹೆಮ್ಮೆ ಎನಿಸುತ್ತದೆ. ಆ ಘಟನೆಗಳನ್ನೆಲ್ಲ ನೆನಪಿಸಿಕೊಂಡರೆ ಮೈ ಜುಮ್ಮ ಎನ್ನುತ್ತದೆ. ಜತೆಗೆ ಖುಷಿಯೂ ಆಗುತ್ತದೆ ಎಂದು ನುಡಿದರು.