ಸಾರಾಂಶ
- ಸರ್ಕಾರ ರೈತರು, ಕೃಷಿ ಕಾರ್ಮಿಕರ ನೆರವಿಗೆ ಧಾವಿಸಲು ಎಐಕೆಕೆಎಂಎಸ್ ಒತ್ತಾಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆತೀವ್ರ ಬರದ ಹಿನ್ನೆಲೆ ರೈತರ ಎಲ್ಲ ಬೆಳೆಗಳ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು. ಎಲ್ಲ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ವೃತ್ತದಿಂದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಎಸಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಂಘಟನೆ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಬಿ.ಎಸ್. ಸುನಿತ್‌ಕುಮಾರ ಮಾತನಾಡಿ, ತೀವ್ರ ಬರದಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಅಂತರ್ಜಲ ಕುಸಿತ, ಮತ್ತೊಂದು ಕಡೆ ಬಿಸಿಲ ಝಳ, ಮಗದೊಂದು ಕಡೆ ಉಷ್ಣಗಾಳಿ. ಇದರಿಂದಾಗಿ ಬೆಳೆಗಳು, ತೋಟದ ಬೆಳೆಗಳು ನಾಶವಾಗಿವೆ. ಜಾನುವಾರುಗಳು, ಜನರು ನೀರಿಲ್ಲದೇ, ಪರದಾಡುವ ಸ್ಥಿತಿ ಇದೆ. ರಾಸುಗಳಿಗೆ ಮೇವಿಲ್ಲದೇ ಅವುಗಳನ್ನು ಸಿಕ್ಕ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದರು.
ಹಾಳಾದ ಎಲ್ಲ ಬೆಳೆಗಳಿಗೂ ಸಮರ್ಪಕ ಪರಿಹಾರ ನೀಡಬೇಕು. ಎಲ್ಲ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಸಮಾರೋಪಾದಿಯಲ್ಲಿ ಎಲ್ಲ ರೀತಿಯ ಬರ ಪರಿಹಾರದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗ ಖಚಿತಪಡಿಸಬೇಕು. ಕೊಳವೆಬಾವಿ ವೆಚ್ಚ ವಿಪರೀತವಾಗಿ ಏರಿಸಿದ್ದನ್ನು ತಡೆಯಬೇಕು ಎಂದು ಆಗ್ರಹಿಸಿದರು.ರೈತರಿಗೆ ಅಪಮಾನವಾಗುವ ರೀತಿಯಲ್ಲಿ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್‌ಗಳ ಮೇಲೆ ನಿಯಂತ್ರಣ ಪಡೆಯಬೇಕು. ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಖರೀದಿಸಿದ ಉತ್ಪನ್ನಗಳ ಹಣವನ್ನು ತ್ವರಿತವಾಗಿ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿ, ರಾಜ್ಯದ 223 ತಾಲೂಕುಗಳಲ್ಲಿ ಬರ ಆವರಿಸಿದೆ. ಜನ, ಜಾನುವಾರು ನೀರು, ಮೇವಿಗಾಗಿ ಹಾಹಾಕಾರ ಶುರುವಾಗಿದೆ. ಮಾಧ್ಯಮಗಳ ಪ್ರಕಾರ 29 ಜಿಲ್ಲೆಗಳ 149 ತಾಲೂಕಗಳ 1920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಕೊಳವೆ ಬಾವಿಗಳು ಬತ್ತಿಹೋಗಿವೆ. ಕೆರೆಗಳಲ್ಲಿ, ಹೊಂಡ, ಕಟ್ಟೆಗಳಲ್ಲಿ ನೀರಿಲ್ಲ. ನೀರು ಪೂರೈಸುವ ಕೆಲಸವನ್ನು ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಕೊಳವೆಬಾವಿ ಕೊರೆಸಲು ಇರುವಂತಹ ಹಣವನ್ನು ಜಿಲ್ಲಾಡಳಿತವಾಗಲೀ, ತಾಲೂಕು ಆಡಳಿತವಾಗಲೀ ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಅನುಮಾನ ಗ್ರಾಮೀಣರನ್ನು ಕಾಡುತ್ತಿದೆ ಎಂದು ದೂರಿದರು.ಮೇವಿನ ಬ್ಯಾಂಕ್ ಪ್ರಮಾಣವೂ ಅಷ್ಟಾಗಿ ಇಲ್ಲ. ಜಾನುವಾರುಗಳಿಗೆ ಪಶು ಆಹಾರ ನೀಡುವುದಕ್ಕೂ ಹಣಕಾಸಿನ ತೊಂದರೆ ಇದೆ. ಬರದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೆಲಸಗಳು ನಡೆಯುತ್ತಿಲ್ಲ. ಕೃಷಿ ಕಾರ್ಮಿಕರು, ಕೃಷಿ ನೆಚ್ಚಿಕೊಂಡಿರುವವರಿಗೆ ಉದ್ಯೋಗವಿಲ್ಲದೇ, ಊರೂರು ಅಲೆಯುವ, ಗುಳೆ ಹೋಗುವ ಪ್ರಮೇಯ ಬಂದಿದೆ. ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲು, ಹಣ ಬಿಡುಗಡೆ ಮಾಡುವುದರಲ್ಲಿ ವ್ಯತ್ಯಯ ಆಗುತ್ತಿದೆ. ಇದರಿಂದ ಗ್ರಾಮೀಣರು ಆದಾಯವಿಲ್ಲದೇ, ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ, ಮಂಜುನಾಥ ರೆಡ್ಡಿ, ಚೌಡಪ್ಪ ಹುಣಸೇಕಟ್ಟೆ ರುದ್ರಪ್ಪ ಭೀಮಣ್ಣ ಮಾಯಕೊಂಡ, ನಾಗರಾಜ ನಲ್ಕುಂದ, ಶಿವಲಿಂಗಪ್ಪ ನಲ್ಕುಂದ ಇತರರು ಇದ್ದರು.- - - -20ಕೆಡಿವಿಜಿ5:
ಬೆಳೆ ಪರಿಹಾರಕ್ಕೆ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಕೆಕೆಎಂಎಸ್ ಜಿಲ್ಲಾ ಘಟಕದಿಂದ ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟಿಸಲಾಯಿತು.