ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ: ಸಂಯುಕ್ತಾ ಪಾಟೀಲ

| Published : May 05 2024, 02:12 AM IST

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ: ಸಂಯುಕ್ತಾ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಬೀಳಗಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಪಾದಯಾತ್ರೆ ಮಾಡಿ ಮತಯಾಚನೆ ಮಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವಂತೆ ಕೇಂದ್ರದಲ್ಲೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ರೈತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಳವಳಿ ಮಾಡಿದರೆ ಕೇಂದ್ರ ಸರ್ಕಾರ ರೈತ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಬೆಂಬಲ ಬೆಲೆ ನಿಗದಿಪಡಿಸಿ ಎಂಬ ಬೇಡಿಕೆಗೆ ಸ್ಪಂದಿಸಲಿಲ್ಲ. ಬದಲಿಗೆ ಶ್ರೀಮಂತ ಉದ್ಯಮಿಗಳ ಬೆಂಬಲಕ್ಕೆ ನಿಂತಿತು ಎಂದು ವಾಗ್ದಾಳಿ ಮಾಡಿದರು.

ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ನಷ್ಟ ಅನುಭವಿಸುವುದೇ ಹೆಚ್ಚು. ಹೀಗಾಗಿ ಕಾಂಗ್ರೆಸ್ ಪಕ್ಷ ಬೆಂಬಲ ಬೆಲೆ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡ್‌ ಗೆ ಸಹಿ ಮಾಡಿದ್ದಾರೆ. ರಾಜ್ಯದಂತೆ ಕೇಂದ್ರದಲ್ಲೂ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ಹಲವು ಕನಸುಗಳನ್ನು ಹೊತ್ತು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಜಿಲ್ಲೆಯಲ್ಲಿ ರೈಲ್ವೆ, ನೀರಾವರಿ ಯೋಜನೆ, ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ನನ್ನ ಕನಸುಗಳಾಗಿವೆ ಎಂದ ಅವರು, ಪಿ.ಸಿ.ಗದ್ದಿಗೌಡರ್ ಅವರಿಗೆ ಸತತ ನಾಲ್ಕು ಬಾರಿ ಅವಕಾಶ ನೀಡಿದ್ದೀರಿ. ನನಗೆ ಒಂದು ಅವಕಾಶ ಕೊಟ್ಟು ನೋಡಿ, ನನ್ನ ಮೇಲೆ ಇಟ್ಟಿರುವ ನಂಬಿಕೆ ಹುಸಿಗೊಳಿಸದೆ ಕೆಲಸ ಮಾಡಿ ತೋರಿಸುವೆ ಎಂದು ಮನವಿ ಮಾಡಿದರು..

ದೇಶ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಕೇಂದ್ರದಲ್ಲಿ ಇರುವ ಬಿಜೆಪಿ ನೇತೃತ್ವದ ಸರ್ಕಾರ ಶ್ರೀಮಂತರ ಪರವಾಗಿದೆ. ರೈತರು, ಬಡವರ ಬದುಕಿನ ಬಗ್ಗೆ ಚಿಂತೆ ಇಲ್ಲ. ಕೃಷಿಸಾಲ ಮನ್ನಾ ಮಾಡಲಿಲ್ಲ. ಬದಲಿಗೆ ಉದ್ಯಮಿಗಳ ಸಾಲಮನ್ನಾ ಮಾಡಿದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ₹ 130 ಕೋಟಿ ಸಾಲ ಮಾಡಿದ್ದಾರೆ. ಮೋದಿ ಬರುವ ಮುಂಚೆ ಎಲ್ಲ ಪ್ರಧಾನಿಗಳ ಅವಧಿಯಲ್ಲಿ ₹ 53 ಕೋಟಿ ಸಾಲ ಮಾಡಿದ್ದರು. ಯಾವ ಉದ್ದೇಶಕ್ಕೆ ಇಷ್ಟೊಂದು ಸಾಲ ಮಾಡಿದರು ಎಂದು ಕೇಳಬೇಕಾಗಿದೆ ಎಂದರು.----ಕೋಟ್‌---

ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದು ಸ್ಪಷ್ಟವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಹತಾಶೆಯಿಂದ ಮನಬಂದಂತೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಮತಯಾಚನೆ ಮಾಡುವ ಬದಲಿಗೆ ಜಾತಿ, ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತ ಹಿಂದುತ್ವದ ಮೇಲೆ ಮತ ಕೇಳುತ್ತಿದ್ದಾರೆ. ನಾವೆಲ್ಲರೂ ಹಿಂದೂಗಳೇ.

-ಸಂಯುಕ್ತಾ ಪಾಟೀಲ ಕಾಂಗ್ರೆಸ್‌ ಅಭ್ಯರ್ಥಿ