ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಮಾರುಕಟ್ಟೆಯಲ್ಲಿ ಹೆಸರು, ಸೋಯಾ ಹಾಗೂ ಉದ್ದಿನ ಬೆಲೆಯಲ್ಲಿ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರ ಶುರು ಮಾಡಿರುವ ಕನಿಷ್ಠ ಬೆಂಬಲ ಬೆಲೆಯ ಖರೀದಿ ಕೇಂದ್ರದತ್ತ ರೈತರು ಈ ಬಾರಿ ವಿಶೇಷ ಆಸಕ್ತಿ ವಹಿಸಿ ನೋಂದಣಿಗೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ ಪ್ರತಿ ಬಾರಿ ಮುಂಗಾರು ಅಥವಾ ಹಿಂಗಾರು ಹಂಗಾಮಿನಲ್ಲಿ ಆಯಾ ಬೆಳೆಗಳಿಗೆ ತಕ್ಕಂತೆ ರಾಜ್ಯ ಸರ್ಕಾರದ ಆದೇಶದಂತೆ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ತೆರೆದಾಗ, ಅಷ್ಟೊಂದು ಸ್ಪಂದನೆ ತೋರದ ರೈತರು ಈ ಬಾರಿ ತಮ್ಮ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿಯೇ ಮಾರಲು ತೀರ್ಮಾನಿಸಿದ್ದಾರೆ.ಹೆಚ್ಚಿದ ಉತ್ಸಾಹ:
ಕಳೆದ ಹಲವು ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸುತ್ತಿದೆ. ಮಾರುಕಟ್ಟೆ ಬೆಲೆಗಳು ಕನಿಷ್ಠ ಬೆಂಬಲ ಬೆಲೆಯ ಸಮೀಪದಲ್ಲಿ ಸುಳಿದಾಡುತ್ತಿರುವುದರಿಂದ ರೈತರು ಈ ಕೇಂದ್ರಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕಡಿಮೆ ಆಸಕ್ತಿ ತೋರಿಸಿದ್ದರು. ನೋಂದಣಿ ಗದ್ದಲ, ತಡವಾಗಿ ರೈತರಿಗೆ ಹಣ ಸಿಗುವುದು ಸಹ ಪ್ರಮುಖ ಕಾರಣವಾಗಿತ್ತು. ಆದರೆ, ಈ ವರ್ಷ ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾಗಿದ್ದು, ಸರ್ಕಾರಿ ಖರೀದಿಗೆ ರೈತರ ಉತ್ಸಾಹ ಹೆಚ್ಚಿದೆ.ಸಮಾಧಾನ ತಂದ ಬೆಂಬಲ ಬೆಲೆ:
ಕಳೆದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ ಮೀರಿದ್ದರೂ ಭಾರೀ ಮಳೆಯು ಹೆಚ್ಚಿನ ಪ್ರಮಾಣದ ಮುಂಗಾರು ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಇದು ಗುಣಮಟ್ಟದ ಮೇಲೆ ಪರಿಣಾಮ ಬೀರಿತು. ಕಳಪೆ ಗುಣಮಟ್ಟದಿಂದಾಗಿ ಹೆಸರು ಕಾಳಿನ ಬೇಡಿಕೆ ಇಲ್ಲದಂತಾಯಿತು. ಗುಣಮಟ್ಟದ ಹೆಸರಿಗೂ ಕಪ್ಪು ಚುಕ್ಕೆ ಉಂಟಾಯಿತು.ಹೀಗಾಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 3,000ರಿಂದ ಗರಿಷ್ಠ ₹ 5,000ರ ವರೆಗೆ ಇತ್ತು. ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹ 8.768 ಘೋಷಿಸಿದೆ. ಅದೇ ರೀತಿ ಸೋಯಾ ₹ 4ರಿಂದ ₹ 4,500 ಮಾರುಕಟ್ಟೆಯಲ್ಲಿದ್ದರೆ ಬೆಂಬಲ ಬೆಲೆಯಲ್ಲಿ ₹ 5328 ಇದೆ. ಹಾಗೆಯೇ, ಉದ್ದಿನ ಬೆಲೆ ₹ 5ರಿಂದ ₹ 6000 ಒಳಗೆ ಇದ್ದರೆ, ಬೆಂಬಲ ಬೆಲೆಯಲ್ಲಿ ₹ 7800 ನಿಗದಿ ಮಾಡಲಾಗಿದೆ. ಈ ಬೆಲೆಯು ರೈತರಲ್ಲಿ ಉತ್ಸಾಹ ಹೆಚ್ಚಿಸಿದ್ದು ಖರೀದಿ ಕೇಂದ್ರದತ್ತ ಧಾವಿಸುತ್ತಿದ್ದಾರೆ. ಪ್ರತಿಯೊಬ್ಬ ರೈತರು 15 ಕ್ವಿಂಟಲ್ ವರೆಗೂ ಹೆಸರು, 20 ಕ್ವಿಂಟಲ್ ವರೆಗೆ ಸೋಯಾ ಹಾಗೂ 15 ಕ್ವಿಂಟಲ್ ವರೆಗೂ ಉದ್ದು ಮಾರಾಟ ಮಾಡಬಹುದು.
ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಬರೀ ಸಮೀಕ್ಷೆಯಾಗಿದೆ. ಪರಿಹಾರದ ಭರವಸೆ ಇದೆ. ಆದರೆ, ಇನ್ನೂ ಪರಿಹಾರ ಸಿಕ್ಕಿಲ್ಲ. ಬೆಂಬಲ ಬೆಲೆ ಘೋಷಿಸಿದ್ದು, ಖರೀದಿ ಮಿತಿ ಕಡಿಮೆಯಾಗಿದೆ. ಸರ್ಕಾರವು ಮಿತಿ ಹೆಚ್ಚಿಸಿದ್ದಲ್ಲದೇ ಕೂಡಲೇ ಖರೀದಿಸಿದ ಬೆಳೆಯ ಪಾವತಿ ಶೀಘ್ರ ಮಾಡಬೇಕು ಎಂದು ಉಪ್ಪಿನ ಬೆಟಗೇರಿಯ ರೈತ ಈರಣ್ಣ ಮಡಿವಾಳರ ಆಗ್ರಹಿಸಿದರು.ಹೆಸರು, ಸೋಯಾ ಮತ್ತು ಉದ್ದು ನೋಂದಣಿ ಶುರುವಾಗಿದ್ದು, ರೈತರು ಆಸಕ್ತಿಯಿಂದ ಖರೀದಿ ಕೇಂದ್ರಗಳತ್ತ ಬರುತ್ತಿದ್ದಾರೆ. ಕಡಿಮೆ ಗುಣಮಟ್ಟದ ಹೆಸರು, ಸೋಯಾ, ಉದ್ದು ಸಹ ಸ್ವೀಕರಿಸಬೇಕು ಮತ್ತು ಖರೀದಿ ಮಿತಿ ಹೆಚ್ಚಿಸಬೇಕು ಎಂದು ರೈತರು ವಿನಂತಿಸಿದ್ದಾರೆ. ಈ ಬೇಡಿಕೆಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ವಿನಯ್ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಆರ್ಥಿಕ ಒತ್ತಡದಲ್ಲಿ ರೈತ
ಭಾರಿ ಮಳೆಯಿಂದಾಗಿ ಹೆಸರುಕಾಳು ಮತ್ತು ಉದ್ದಿನ ಬೆಳೆಯ ಗುಣಮಟ್ಟ ಕುಸಿದಿದ್ದು, ಬೆಲೆಗಳು ಕುಸಿದಿವೆ. ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದರೂ ಅನೇಕ ರೈತರು ಆರ್ಥಿಕ ಒತ್ತಡದಲ್ಲಿದ್ದಾರೆ. ಸಣ್ಣ-ಪುಟ್ಟ ಗುಣಮಟ್ಟದ ಸಮಸ್ಯೆಗಳಿದ್ದರೂ ಸರ್ಕಾರ ಎಲ್ಲ ಉತ್ಪನ್ನಗಳನ್ನು ಖರೀದಿಸಬೇಕು ಮತ್ತು ಖರೀದಿ ಮಿತಿಗಳನ್ನು ಹೆಚ್ಚಿಸಬೇಕು ಎಂದು ರೈತ ಕಾರ್ಯಕರ್ತ ಮಲ್ಲಿಕಾರ್ಜುನಗೌಡ ಬಾಲನಗೌಡರ್ ಒತ್ತಾಯಿಸಿದ್ದಾರೆ.