ಪಾಂಡವಪುರ ತಾಲೂಕಿನಲ್ಲಿ ಈವರೆಗೂ 110 ಹಾಲು ಕರೆಯುವ ಯಂತ್ರದ ಸಬ್ಸಡಿಯನ್ನು ವಿತರಣೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ 338 ಮಂದಿ ಫಲಾನುಭವಿಗಳಿಗೆ ಸಬ್ಸಡಿ ಹಣದ ಚೆಕ್ ವಿತರಿಸಲಾಗಿದೆ. ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮನ್ನುಲ್ ಒಕ್ಕೂಟದಿಂದ ರಾಸುಗಳಿಗೆ ವಿಮೆ ಮಾಡಲಾಗುತ್ತಿದ್ದು, ರೈತರು ಕಡ್ಡಾಯವಾಗಿ ಮಾಡಿಸಬೇಕು ಎಂದು ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾ ಭವನದಲ್ಲಿ ಮನ್ಮುಲ್ ಒಕ್ಕೂಟದಿಂದ ಉತ್ಪಾದಕ 338 ಫಲಾನುಭವಿಗಳಿಗೆ 65 ಲಕ್ಷ ರು. ಮೌಲ್ಯದ ಹಾಲು ಕರೆಯುವ ಯಂತ್ರದ ಸಬ್ಸಿಡಿ ಹಣದ ಚೆಕ್ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ ಈವರೆಗೂ 110 ಹಾಲು ಕರೆಯುವ ಯಂತ್ರದ ಸಬ್ಸಡಿಯನ್ನು ವಿತರಣೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ 338 ಮಂದಿ ಫಲಾನುಭವಿಗಳಿಗೆ ಸಬ್ಸಡಿ ಹಣದ ಚೆಕ್ ವಿತರಿಸಲಾಗಿದೆ. ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು ಎಂದರು.ಈಗಾಗಲೇ ತಾಲೂಕಿನಲ್ಲಿ 1700 ರಬ್ಬರ್ ಮ್ಯಾಟ್ ವಿತರಣೆ ಮಾಡಲಾಗಿದೆ. ಇನ್ನೂ 1300 ರಬ್ಬರ್ ಮ್ಯಾಟ್ ಬರಬೇಕಾಗಿದೆ. ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.
ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ರಾಸುಗಳ ವಿಮೆಯ ಮೊತ್ತ ಮೊದಲು 60 ಸಾವಿರಕ್ಕೆ ಸೀಮಿತವಾಗಿತ್ತು. ಈಗ ವಿಮೆ ಹಣದ ಮೊತ್ತವನ್ನು 1 ಲಕ್ಷದ ವರೆಗೂ ಏರಿಕೆ ಮಾಡಲಾಗಿದೆ. ಎಲ್ಲಾ ರೈತರು ಗುಣ ಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದರು.ಹಾಲು ಉತ್ಪಾದಕ ರೈತರ ಪ್ರತಿಭಾವಂತ ಮಕ್ಕಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಆ.15ರ ಒಳಗೆ ಅರ್ಜಿಸಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕ ಆದರ್ಶ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರಾ ಅಧ್ಯಕ್ಷ ಶಿವಪ್ಪ, ಉಪಧ್ಯಕ್ಷ ಬೋರೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ ಸೇರಿದಂತೆ ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿಗಳು ಹಾಜರಿದ್ದರು.