ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ರೈತರ ಹಕ್ಕುಗಳಿಗಾಗಿ ಮತ್ತು ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ರೈತರು ಸಂಘಟಿತರಾಗದೇ ಬೇರೆ ಪರಿಹಾರವಿಲ್ಲ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ತಿಳಿಸಿದರು.ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಶಾಖೆ ಉದ್ಘಾಟನೆ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಳುವ ಸರ್ಕಾರದ ರೈತ ವಿರೋಧ ನೀತಿಗಳನ್ನು ವಿರೋಧಿಸುವ ನಿಟ್ಟಿನಲ್ಲಿ ರೈತಸಂಘ ಕಾರ್ಯನಿರ್ವಹಿಸುತ್ತಿದೆ
ರೈತಕುಲಕ್ಕೆ ಆಗುವ ಅನ್ಯಾಯಗಳನ್ನು ತಡೆಯಲು 1980 ರಿಂದಲೂ ರೈತಸಂಘ ತನ್ನದೇ ಹೋರಾಟವನ್ನು ಮಾಡಿಕೊಂಡು ಬಂದಿದೆ, ರೈತರನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಹೋರಾಟಕ್ಕೆ ಬುನಾದಿ ಹಾಕಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಸಿದ್ಧಾಂತಗಳನ್ನು ಜೀವಂತವಾಗಿರಿಸಬೇಕು ಎಂದರು.ಹುಟ್ಟು ಹೋರಾಟಗಾರರಾದ ನಂಜುಂಡಸ್ವಾಮಿಯವರು ರೈತರಿಗಾಗುವ ಅನ್ಯಾಯಗಳ ವಿರುದ್ಧ ಅಷ್ಟೇಯಲ್ಲದೇ ಸಾಮಾಜಿಕ, ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡಿ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಸರ್ಕಾರಗಳಿಂದ ರೈತರಿಗಾಗುವ ಅನ್ಯಾಯಗಳನ್ನು ಅಂಕಿ-ಅಂಶಗಳ ಮೂಲಕ ರೈತರ ಜಾಗೃತಿಗೊಳಿಸುತ್ತಿದ್ದರು.
ರೈತ ಈ ದೇಶದ ಮಾಲೀಕ, ರೈತ ಸಾಲಗಾರನಲ್ಲ, ಸರ್ಕಾರವೇ ರೈತನಿಗೆ ಬಾಕಿದಾರ ಎಂಬ ಘೋಷವಾಕ್ಯದೊಂದಿಗೆ ಪ್ರತಿಯೊಬ್ಬ ರೈತರಿಗೂ ಹೊಸ ಚೈತನ್ಯ, ಆತ್ಮಸ್ಥೆರ್ಯ, ಸ್ವಾಭಿಮಾನ ಬಿತ್ತಿದ ವಿಶ್ವ ರೈತನಾಯಕನಾಗಿದ್ದರು. ಅವರ ಹೋರಾಟದ ದಾಟಿಗೆ ಸರ್ಕಾರಗಳು ಮಣಿದು ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಿದ್ದವು ಎಂದರು.ಪ್ರಸ್ತುತ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದು ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆಬ್ಬಳ್ಳಿ ಶಿವರಾಜು ಮಾತನಾಡಿ. ಒಗ್ಗಟ್ಟಿನಲ್ಲಿ ಬಲವಿದೆ, ಒಗ್ಗಟ್ಟಿನಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ, ಕೇಂದ್ರ ಸರ್ಕಾರ ಹಿಂಪಡೆದಿರುವ ರೈತ ವಿರೋಧಿ ಮೂರು ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯದಿರುವುದು ವಿಪರ್ಯಾಸವೇ ಸರಿ, ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಆಗಬೇಕಿದೆ ಎಂದು ತಿಳಿಸಿದರು.ಬೆಟ್ಟೆಗೌಡನದೊಡ್ಡಿ ರವಿಕುಮಾರ್, ಕುಮಾರ, ಸ್ವಾಮಿ, ಕೆಂಪೇಗೌಡ, ನಾಗರಾಜು,ಪುಟ್ಟಸ್ವಾಮಿ ಸೇರಿ ಹಲವರು ರೈತ ಸಂಘಕ್ಕೆ ಸೇರ್ಪಡೆಯಾದರು. ತಾಲೂಕು ಕಾರ್ಯದರ್ಶಿ ಕೋಡಿಹಳ್ಳಿ ಶಿವರಾಜು, ಅರುಣ, ಗೌರಮ್ಮ, ಶೋಬಮ್ಮ ಸೇರಿ ರೈತ ಮುಖಂಡರು ಉಪಸ್ಥಿತರಿದ್ದರು.