ಸಾರಾಂಶ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ । ಗುಳದಪುರ ಗ್ರಾಮ ಘಟಕ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ನ್ಯಾಯ ಸಮ್ಮತವಾಗಿ ದೊರೆಯಬೇಕಾದ ಸವಲತ್ತುಗಳನ್ನು ಪಡೆಯಲು ರಸ್ತೆಗೆ ಇಳಿದು ಹೋರಾಟ ಮಾಡುವುದೊಂದೇ ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣಯ್ಯ ಬಣದ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ ತಿಳಿಸಿದರು.
ತಾಲೂಕಿನ ಗುಳದಪುರ ಗ್ರಾಮದಲ್ಲಿ ರೈತ ಸಂಘದ ಗುಳದಪುರ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ‘ಹಿಂದೆ ೨೦೨೧ರಲ್ಲಿ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಉಗ್ರ ಹೋರಾಟದ ಮೂಲಕ ಪ್ರಧಾನಿ ಮೋದಿಯವರು ನಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಮಾಡಿದ ರೈತ ಸಂಘದ ದುರ್ಬಳಕೆ ಕೆಲವರಿಂದ ಆಗುತ್ತಿದ್ದರೂ ಸಹ ಸಾಮಾನ್ಯ ರೈತರಿಗೆ ನಮ್ಮ ರೈತ ಸಂಘಟನೆಯ ಅಗತ್ಯತೆ ಹೆಚ್ಚಿದೆ. ರೈತರಿಗೆ ಸಾಲಮನ್ನಾದಂತಹ ಅನುಕಂಪ ಅಥವಾ ಭಿಕ್ಷೆ ಬೇಡ, ಆದರೆ ನಾವು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಅಗತ್ಯವಾಗಿದೆ’ ಎಂದು ಹೇಳಿದರು.‘ಇತ್ತೀಚಿನ ದಿನಗಳಲ್ಲಿ ಖಾಸಗೀಕರಣ ಹೆಚ್ಚುತ್ತಿದ್ದು, ವಿದ್ಯುತ್ ಇಲಾಖೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿದಲ್ಲಿ ಅವರು ಹೇಳಿದಂತೆ ಕೇಳಬೇಕಾದ ಪರಿಸ್ಥಿತಿ ಬರಬಹುದು. ಹೋರಾಟ ಮಾಡಲು ಸಾಧ್ಯವಿಲ್ಲ. ರದ್ಧಿ ಪೇಪರ್ ಮೇಲೆ ಬಂಡವಾಳ ಹಾಕಿ ಹಣ ಮಾಡುವ ವ್ಯಕ್ತಿಗಳಿಂದ ನಮ್ಮ ಏಳಿಗೆ ಸಾಧ್ಯವಿಲ್ಲ, ಇಂತಹ ಪರಿಸ್ಥಿತಿ ಬರಬಾರದು ಎಂಬ ಕಾರಣದಿಂದ ರೈತ ಸಂಘದ ಸ್ಥಾಪನೆ ಮತ್ತು ಹೋರಾಟ ಮನೋಭಾವ ಬೇಕಿದೆ. ಹಿಂದೆ ದೇಶದ ಪ್ರತಿಯೊಬ್ಬ ವ್ಯಕ್ತಿ ಸ್ವಾತಂತ್ರ ಹೋರಾಟದಲ್ಲಿ ಇರಲಿಲ್ಲ. ಆದರೆ ಅವರ ನೈತಿಕ ಬೆಂಬಲ ಹಾಗೂ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮಾತುಗಳು ಹೋರಾಟದ ಕಿಚ್ಚನ್ನು ಹೆಚ್ಚಿಸಿತ್ತು. ಅದೇ ರೀತಿ ನೀವು ರೈತ ಸಂಘ ಸ್ಥಾಪಿಸಿಕೊಳ್ಳುವುದು ಮತ್ತು ಹೋರಾಟದ ಮನಸ್ಥಿತಿಯನ್ನು ಬೆಳಸಿಕೊಂಡು, ನಮ್ಮ ಹೋರಾಟದ ದಿನಗಳಲ್ಲಿ ನಮ್ಮೊಂದಿಗೆ ನಿಮ್ಮ ಸಹಮತ ಅಗತ್ಯವಾಗಿದೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಂಚಾಲಕ ಪ್ರಸನ್ನಗೌಡ, ಜಿಲ್ಲಾಧ್ಯಕ್ಷ ಹಿರಿಸಾವೆ ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಶೆಟ್ಟಿ, ತಾಲೂಕು ಅಧ್ಯಕ್ಷ ಸೋಮಶೇಖರ್, ರೈತ ಮುಖಂಡರಾದ ಪರಮೇಶ, ದಯಾನಂದ, ರವಿ, ರಘು, ರಂಗಸ್ವಾಮಿ, ಜಯಂತಿ, ಪುಟ್ಟಮ್ಮ, ಸೋಮಪ್ರಭ, ರಾಜಮ್ಮ, ಅಶ್ವಿನಿ, ಇತರರು ಇದ್ದರು.