ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರೈತನಿಗೆ ನೀರಿನ ಗ್ಯಾರಂಟಿಯನ್ನು ಆ ದೇವರು ಕೊಟ್ಟು ಬಿಟ್ಟರೆ ಸಾಕು, ಆತ ಬೇರೇನೂ ಕೇಳುವುದಿಲ್ಲ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಗುರುವಾರ ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ, ನವಗ್ರಹ ಹಾಗೂ ಕಾಳಿಕಾಂಬ ದೇವಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ರು. 850 ಕೋಟಿ ಮಂಜೂರಾಗಿದ್ದು, ಕಾಮಗಾರಿ ಬಹುಪಾಲು ಮುಕ್ತಾಯ ಹಂತಕ್ಕೆ ಬಂದ ಸಂದರ್ಭದಲ್ಲಿ ಸಾಸ್ವೇಹಳ್ಳಿ ಮಂಜಣ್ಣ ಅವರ ಜಮೀನಿನಲ್ಲಿ ಹಾದುಹೋಗಬೇಕಾಗಿದ್ದ ಎಂಟತ್ತು ವಿದ್ಯುತ್ ಕಂಬಗಳ ಅಳವಡಿಕೆ ಕೆಲಸ ಬಾಕಿ ಇತ್ತು, ಅದನ್ನು ಅವರು ಅಳವಡಿಸದಂತೆ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ನಾವು ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ, ಸಾಸ್ವೇಹಳ್ಳಿ ಮಂಜಣ್ಣ ಅವರ ಮನವೊಲಿಸಿದ್ದು, ಅವರು ಅದಕ್ಕೆ ಸಮ್ಮತಿಸಿದ್ದಾರೆ, ಆದ್ದರಿಂದ ಕೋರ್ಟ್ ಕೂಡಾ ಇಂದೋ ಅಥವಾ ನಾಳೆಯೋ ಡಿಕ್ಟೇಶನ್ ಕೊಡುವ ಹಂತದಲ್ಲಿದೆ, ಶೀಘ್ರದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಏರೋಬಿಕ್ ರೈಸ್ ಬೆಳೆಯುವಂತೆ ಸಲಹೆ: ಮುಂದಿನ ದಿನಗಳಲ್ಲಿ ಏರೋಬಿಕ್ ರೈಸ್ ಬೆಳೆದರೆ ರೈತನಿಗೆ ಕೈ ತುಂಬಾ ಆದಾಯ ಸಿಗಲಿದೆ. ಈ ಭತ್ತದ ಬೆಳೆಗೆ ರೊಳ್ಳೆ ಹೊಡೆಯುವ ಹಾಗೂ ಆತೀ ಹೆಚ್ಚು ನೀರಿನ ಅವಶ್ಯಕತೆ ಇಲ್ಲ, ವಾರ ಕ್ಕೊಮ್ಮೆ ಸ್ಪಿಂಕ್ಲರ್ ನಲ್ಲಿ ನೀರು ಹಾಯಿಸಬೇಕು. ಒಂದು ರೀತಿಯಲ್ಲಿ ಮೆಕ್ಕೆ ಜೋಳದಂತೆ ಬೆಳೆ ಬೆಳೆಯುವ ರೀತಿಯಲ್ಲಿ ಈ ಭತ್ತವನ್ನು ಬೆಳೆಯಬಹುದು ಎಂದರು.ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ನೀರಿನ ಮಿತಬಳಕೆಗೆ ನಾವೆಲ್ಲರೂ ಮುಂದಾಗಬೇಕು. ರೈತರಿಗೆ ಎಲ್ಲರೂ ಸಹಕಾರ ನೀಡಬೇಕು, ರೈತರು ಸುಖವಾಗಿ ದ್ದರೆ, ದೇಶ ಸಮೃದ್ಧಿಯಾಗಿರುತ್ತದೆ ಎಂದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಭಗವಂತ ನಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತಾನೆ, ಶ್ರೀಮಂತಿಕೆ ಬಂದಾಗ ನಾವೆಲ್ಲರೂ ಆತನನ್ನು ಮರೆಯುತ್ತೇವೆ, ಆಗ ದೇವರು ನಮ್ಮನ್ನು ಬರಗಾಲದಂತಹ ಪರೀಕ್ಷೆಗೆ ಒಡ್ಡುತ್ತಾನೆ ಎಂದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಇಡೀ ನಾಡಿಗೆ ಬರಗಾಲ ಬಂದಿದ್ದರೂ ಈ ಯಕ್ಕನಹಳ್ಳಿ ಗ್ರಾಮಕ್ಕೆ ಬರಗಾಲ ಬಂದಿಲ್ಲ ಎಂದರು. ಇದೊಂದು ಶಿಫ್ಟಿಂಗ್ ವಿಲೇಜ್ ಆಗಿದ್ದು, ಭದ್ರಾ ಚಾನೆಲ್ ಹರಿಯುತ್ತಿದ್ದು, ನೀರು ಸಾಕಷ್ಟು ಲಭ್ಯವಿದೆ. ಇನ್ನು, ಈ ಗ್ರಾಮದಲ್ಲಿ ಭಕ್ತಿಗೂ ಬರಗಾಲವಿಲ್ಲ ಎಂದರು.
ಸಾಧು ವೀರಶೈವ ಸಮಾಜದ ರಾಜ್ಯ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ನೀರಿನ ಸದ್ಬಳಕೆ ಆಗದಿದ್ದರೆ ಮುಂದೆ ಒಕ್ಕಲುತನ ಮಾಡಲು ಕಷ್ಟ ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಆಪ್ತ ಸಹಾಯಕ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಂ.ನಾಗರಾಜಪ್ಪ ಮಾತನಾಡಿದರು.
ವೇದಿಕೆಯಲ್ಲಿ ಕರಿಬಸಪ್ಪ, ನಿವೃತ್ತ ಯೋಧ ಶಿವಕುಮಾರ್, ಬಿಜೆಪಿ ಮುಖಂಡರಾದ ದೇವರಾಜ್ ನೆಲಹೊನ್ನೆ, ಎ.ಬಿ. ಹನುಮಂತಪ್ಪ, ಎಂ.ಪಿ.ರಾಜು, ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಉಪಸ್ಥಿತರಿದ್ದರುಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪೂರ್ಣಕುಂಭದೊಂದಿಗೆ ಸ್ವಾಮೀಜಿಗಳನ್ನು ರಥದಲ್ಲಿ ಬರಮಾಡಿಕೊಳ್ಳಲಾಯಿತು . ಬೃಹತ್ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು