ಕನಕಪುರ: 80 ವರ್ಷಗಳಿಂದ ಅನುಭವದಲ್ಲಿರುವ ಸಾಗುವಳಿ ಜಮೀನಿನ ಸರ್ವೆ ಮಾಡಲು ಬಿಡುವುದಿಲ್ಲ ಎಂದು ರೈತರು ತಡೆ ಒಡ್ಡಿದ ಘಟನೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ನಡೆಯಿತು

ಕನಕಪುರ: 80 ವರ್ಷಗಳಿಂದ ಅನುಭವದಲ್ಲಿರುವ ಸಾಗುವಳಿ ಜಮೀನಿನ ಸರ್ವೆ ಮಾಡಲು ಬಿಡುವುದಿಲ್ಲ ಎಂದು ರೈತರು ತಡೆ ಒಡ್ಡಿದ ಘಟನೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ನಡೆಯಿತು. ತಾಲೂಕಿನ ಕಸಬಾ ಹೋಬಳಿ ಕೂನೂರು ಸರ್ವೆ ನಂ.273 (ಹಳೆ ನಂಬರ್ 37)ರಲ್ಲಿ ಮಹದೇವ ಬಿನ್ ಮಾದಯ್ಯ ಎಂಬುವರಿಗೆ ಉಪ ವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಭೌತಿಕವಾಗಿ ಸ್ಥಳ ಬಿಡಿಸಿಕೊಡಲು ಕಂದಾಯ ಅಧಿಕಾರಿಗಳು ಸರ್ವೇ ಮಾಡಿಸಲು ಮುಂದಾದಾಗ ಅದೇ ಸರ್ವೇ ನಂ.ನಲ್ಲಿ ಮಂಜೂರಾಗಿ ಅನುಭವದಲ್ಲಿರುವ ಐವತ್ತಕ್ಕೂ ಹೆಚ್ಚು ರೈತರು ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದರು.

ಕೂನೂರು ಗೋಮಾಳ ಸರ್ವೆ ನಂ. 37ರಲ್ಲಿ ಹುಲಿಬೆಲೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಏಳು ರೈತರಿಗೆ ತಲಾ ಎರಡು ಎಕರೆಯಂತೆ ಸಾಗುವಳಿಯಲ್ಲಿ ಮಂಜುರಾಗಿ ಎಲ್ಲಾ ರೈತರು ಭೂಮಿಯನ್ನು ಸಮತಟ್ಟು ಮಾಡಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಏಳು ಕುಟುಂಬಗಳು ವಿಭಾಗವಾಗಿ 25ಕ್ಕೂ ಹೆಚ್ಚು ಕುಟುಂಬಗಳಾಗಿ ತಮ್ಮ ಭಾಗಕ್ಕೆ ಬಂದಂತಹ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. ಇದೇ ಗ್ರಾಮದ ಮಾದಯ್ಯ ಬಿನ್ ಮಹದೇವ ಎಂಬುವರಿಗೆ ಕೂನೂರು ಗೋಮಾಳ 37ರ ಸರ್ವೆ ನಂ.ನಲ್ಲಿ 1.23 ಎಕರೆ ಸಾಗುವಳಿ ಜಮೀನು 1969-70ರಲ್ಲಿ ಮಹದೇವ ಅವರು ಕರಿಗೌಡರಿಗೆ ಜಮೀನನ್ನು ಮಾರಾಟ ಮಾಡಿದ್ದಾರೆ.

ಮಾದಯ್ಯ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಸದರಿ ಜಮೀನನ್ನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಖರೀದಿ ಮಾಡಿಕೊಂಡಿದ್ದರಿಂದ ಉಪವಿಭಾಗಾಧಿಕಾರಿಗಳು 2021-22ನೇ ಸಾಲಿನಲ್ಲಿ ಕರಿಗೌಡರ ಕ್ರಯವನ್ನು ಶೂನ್ಯವೆಂದು ಪರಿಗಣಿಸಿ ಮಹದೇವ ಬಿನ್ ಮಾದಯ್ಯ ಅವರಿಗೆ ಖಾತೆ ವರ್ಗಾವಣೆ ಮಾಡಿ ಭೂಮಿಯನ್ನು ಭೌತಿಕವಾಗಿ ವರ್ಗಾಯಿಸುವಂತೆ ಆದೇಶಿಸಿದ್ದಾರೆ. ಉಪ ವಿಭಾಗಾಧಿಕಾರಿಗಳ ಆದೇಶಿಸಿದ್ದರು.

ಉಪ ವಿಭಾಗಾಧಿಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರ್ ಅವರು ಮಹದೇವ ಬಿನ್ ಮಾದಯ್ಯ ಅವರಿಗೆ ಸೇರಿದ ಜಮೀನನ್ನು ಗುರುತಿಸಿ ಹಸ್ತಾಂತರಿಸುವಂತೆ ಡಿ.19ರಂದು ಕಂದಾಯ ಮತ್ತು ಸರ್ವೆ ಇಲಾಖೆಗೆ ಆದೇಶ ನೀಡಿದ್ದರು. ತಹಸೀಲ್ದಾರರ ಆದೇಶದ ಮೇರೆಗೆ ಕಂದಾಯ ಇಲಾಖೆಯ ರೆವಿನ್ಯೂ ಇನ್‌ಸ್ಪೆಕ್ಟರ್‌ ಶಿವರುದ್ರಪ್ಪ ಹಾಗೂ ತಾಲೂಕು ಸರ್ವೆಯರ್ ಮಹೇಶ್ ಅವರೊಂದಿಗೆ ಸ್ಥಳ ಪರಿಶೀಲನೆ ಮಾಡಿ ಸರ್ವೇ ಮಾಡಲು ಮುಂದಾಗಿದ್ದರು.

ಈ ವೇಳೆ ಸರ್ಕಾರದಿಂದ ತಾವು ಸಾಗುವಳಿಯಲ್ಲಿ ಮಂಜೂರಾತಿ ಪಡೆದು ಹಾಲಿ ಅನುಭವದಲ್ಲಿರುವ ರೈತರು ಮತ್ತು ರೈತ ಮಹಿಳೆಯರು ಮಹದೇವ ಬಿನ್ ಮಾದಯ್ಯ ತನಗೆ ಮಂಜೂರಾಗಿದ್ದ 1.23 ಎಕರೆ ಜಮೀನನ್ನು 1969ರಲ್ಲಿ ಕರಿಗೌಡರಿಗೆ ಚೆಕ್ಕು ಬಂದಿ ಹಾಕಿ ಮಾರಾಟ ಮಾಡಿದ್ದು ಖರೀದಿದಾರರು ಆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು ಅವರು ಸಾಗುವಳಿ ಮಾಡುತ್ತಿದ್ದ ಭೂಮಿ ಮತ್ತು ಅದರ ಚೆಕ್ಕು ಬಂದಿ ಎಲ್ಲವೂ ಸರಿಯಾಗಿದ್ದು ಅದು ಕರಿಗೌಡರು ಖರೀದಿ ಮಾಡಿಕೊಂಡಿದ್ದರು. ಆದರೆ ಮಾದಯ್ಯ ಅವರ ಮೊಮ್ಮಗ ನಾವು ಸಾಗುವಳಿ ಮಾಡುತ್ತಾ ಸರ್ಕಾರಿ ಮಂಜೂರಿ ಪಡೆದು 20 ವರ್ಷಗಳಿಂದ ಕೃಷಿ ಮಾಡುತ್ತಿರುವ ಜಮೀನು ತನಗೆ ಸೇರಬೇಕೆಂದು ದೌರ್ಜನ್ಯದಿಂದ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ವೆ ಅಧಿಕಾರಿಗಳು ಸಾಗುವಳಿ ಭೂಮಿಯನ್ನು ದುರಸ್ತಿ ಮಾಡುವಾಗ ಸ್ಥಳ ಪರಿಶೀಲನೆ ನಡೆಸದೆ ಮಂಜೂರಿ ಜಾಗವನ್ನು ಬಿಟ್ಟು ಬೇರೆ ಜಾಗದಲ್ಲಿ ತಪ್ಪಾಗಿ ಸ್ಕೆಚ್ ಮಾಡಿದ್ದಾರೆ. ಅವರಿಗೆ ಮಂಜೂರಾಗಿರುವ ಜಾಗದಲ್ಲಿ ಅವರಿಗೆ ಸ್ಕೆಚ್ ಮಾಡಿಕೊಡಬೇಕು. ನಮ್ಮ ಭೂಮಿಯನ್ನು ನಮಗೆ ಉಳಿಸಿಕೊಡಬೇಕು. ಯಾವುದೇ ಕಾರಣಕ್ಕೂ ಈ ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ರೈತರು ಮತ್ತು ಮಹಿಳೆಯರು ಅಳತೆ ಮಾಡಲು ಬಿಡದೆ ತಡೆಯೊಡ್ಡಿದರು.

ಸ್ಥಳ ಪರಿಶೀಲನೆ ಮಾಡಿ ಸರ್ವೆ ಮಾಡಲು ಬಂದಿದ್ದ ಕಂದಾಯ ಇಲಾಖೆ ರೆವೆನ್ಯೂ ಇನ್ಸ್‌ಪೆಕ್ಟರ್ ಶಿವರುದ್ರಪ್ಪ ವಾಸ್ತವವಾಗಿ, ಮಹದೇವ ಬಿನ್ ಮಾದಯ್ಯ ಅವರಿಗೆ ಮಂಜೂರಾಗಿರುವ ಜಾಗವೇ ಬೇರೆಯಾಗಿದೆ, ಸ್ಕೆಚ್ ಆಗಿರುವ ಜಾಗವೇ ಬೇರೆಯಾಗಿದೆ, ಹತ್ತಾರು ಕುಟುಂಬಗಳು ಇಲ್ಲಿ ಅನುಭವದಲ್ಲಿರುವುದು ಮತ್ತು ಅವರಿಗೂ ದಾಖಲೆ ಆಗಿರುವುದು ಇಲ್ಲಿ ಕಂಡು ಬರುತ್ತಿದೆ. ಇಲ್ಲಿ ಏನೋ ತಪ್ಪಾಗಿದ್ದು ಜಂಟಿ ಸರ್ವೆ ಮಾಡಿಸಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿ ಅಳತೆ ಕಾರ್ಯವನ್ನು ಕೈಬಿಟ್ಟರು.

ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿದ್ದು ಯಾವುದೇ ಸಂಘರ್ಷಕ್ಕೆ ಅವಕಾಶ ಕೊಡದಂತೆ ಸೂಕ್ತ ಭದ್ರತೆ ಒದಗಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಕನಕಪುರ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ಸಾಗುವಳಿ ಜಮೀನು ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸರ್ವೇ ಮಾಡಲು ಬಿಡದೆ ರೈತರು ಅಡ್ಡಿಪಡಿಸಿದರು.