ಜಿಲ್ಲೆಯ ರೈತರು ಶೂನ್ಯ ಬಡ್ಡಿಯ ಕೃಷಿ ಸಾಲ ಯೋಜನೆಯಲಾಭದಿಂದ ವಂಚಿತ: ಕೊಡಗು ಏಕೀಕರಣ ರಂಗ ಆರೋಪ

| Published : Jul 01 2025, 12:47 AM IST

ಜಿಲ್ಲೆಯ ರೈತರು ಶೂನ್ಯ ಬಡ್ಡಿಯ ಕೃಷಿ ಸಾಲ ಯೋಜನೆಯಲಾಭದಿಂದ ವಂಚಿತ: ಕೊಡಗು ಏಕೀಕರಣ ರಂಗ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶೂನ್ಯ ಬಡ್ಡಿಯ ಕೃಷಿ ಸಾಲ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ.

ಮಡಿಕೇರಿ : ಕಂದಾಯ ಇಲಾಖೆ ವೈಫಲ್ಯದಿಂದ ಜಿಲ್ಲೆಯ ಸಣ್ಣ ಮತ್ತು ಮದ್ಯಮ ವರ್ಗದ ರೈತರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶೂನ್ಯ ಬಡ್ಡಿಯ ಕೃಷಿ ಸಾಲ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ ಎಂದು ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ತೇಲಪಂಡ ಎಂ.ಪ್ರಮೋದ್ ಸೋಮಯ್ಯ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಜಿಲ್ಲೆಯ ವ್ಯವಸಾಯ ಸಂಘಗಳ ಮೂಲಕ ಕನಿಷ್ಠ ದಾಖಲಾತಿಗಳ ಆಧಾರದಲ್ಲಿ ಈ ಹಿಂದೆ ಸಾಲ ದೊರೆಯುತ್ತಿತ್ತು. ಆದರೆ, ಇಂದು ಕಂದಾಯ ಇಲಾಖೆಗಳ ವೈಫಲ್ಯದಿಂದ ಅಡ್ಡಿ ಎದುರಾಗಿದೆ. ಪರಿಣಾಮ ಜಿಲ್ಲೆಯ ಸಾಕಷ್ಟು ರೈತರು ಈ ಯೋಜನೆಯಿಂದ ವಚಿಂತರಾಗುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಜಿಲ್ಲೆಯ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಕೃಷಿ ಸಾಲದೊರೆಯುವಂತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಬ್ರಿಟಿಷ್ ಆಳ್ವಿಕೆ ಒಳಪಟ್ಟಿದ್ದ ಸಂದರ್ಭದಲ್ಲಿ ಕೂರ್ಗ್ ಲ್ಯಾಂಡ್ ರೆವಿನ್ಯೂ ಆಕ್ಟ್ ಜಾರಿಯಲ್ಲಿತ್ತು. ಆ ನಂತರದ ದಿನಗಳಲ್ಲಿ ಪೌತಿ ಖಾತೆಯಂತಹ ಪ್ರಕ್ರಿಯೆಗಳನ್ನು ಜಾರಿಗೆ ತರಲಾಯಿತು. ಇದು ಕೂಡ ಗೊಂದಲಕಾರಿ ಪ್ರಕ್ರಿಯೆಗಳಾಗಿವೆ. ಇದರಿಂದ ಕಂದಾಯ ನಿಗದಿ, ಪಾಲುಪಾರೀಕತ್ತು, ಪೌತಿಖಾತೆ ಬದಲಾವಣೆ ಕೋರಿ ರೈತರು ಸಲ್ಲಿಸಿರುವ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ದೂಳು ಹಿಡಿಯುತ್ತಿದೆ ಎಂದು ಆರೋಪಿಸಿದರು.

ಕೊಡಗಿನ ವಿವಿಧ ಭೂ ಹಿಡುವಳಿಗಳು ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚು ಹೆಸರಿರುತ್ತದೆ. ಅಲ್ಲದೇ, ಎಂದೋ ಮೃತಪಟ್ಟ ಕುಟುಂಬದ ಪಟ್ಟೆದಾರರು ಮತ್ತು ಇತರ ಹಕ್ಕುದಾರರ ಹೆಸರಿರುತ್ತದೆ. ಆದರೆ, ಇತ್ತೀಚೆಗೆ ಸರ್ಕಾರದ ಬೆಳೆ ಸಾಲ ಕೋರುವ ಆರ್‌ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚು ಹೆಸರಿದ್ದಲ್ಲಿ ಮುಚ್ಚಳಿಕೆ ಪಡೆದುಕೊಳ್ಳಲಾಗುತ್ತಿದೆ. ಒಂದು ವರ್ಷದ ನಂತರ 10.75ರಂತೆ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆ ಕೃಷಿ ಖಾತೆ ಸಚಿವ ಚೆಲುವರಾಯಸ್ವಾಮಿ ಅವರು, ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲೆಯ ಭೂ ಹಿಡುವಳಿಗಳ ಸಮಸ್ಯೆಯನ್ನು ಪರಿಗಣಿಸಿ ಲೀಡ್ ಬ್ಯಾಂಕಿನ ಮೂಲಕ ಮಾರ್ಗಸೂಚಿ ರೂಪಿಸುವಂತೆ ಮನವಿ ಮಾಡಿದರು.

ಕೊಡಗು ಏಕೀಕರಣ ರಂಗದ ಸದಸ್ಯರಾದ ಅಚ್ಚಿನಂಡ ತಮ್ಮು ಪೂವಯ್ಯ ಮಾತನಾಡಿ, ಜಿಲ್ಲೆಯ 7 ಗ್ರಾಮಗಳಲ್ಲಿ ಕಂದಾಯ ನಿಗದಿಗಾಗಿ ಸರ್ವೆ ಕಾರ್ಯ ನಡೆದಿತ್ತು. ಆದರೆ, ಕಳೆದ ಒಂದು ವರ್ಷದಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ. ಅಲ್ಲದೇ, ಪಾಲು ಪಾರೀಕತ್ತು, ಪಟ್ಟೆದಾರರ ಹೆಸರು ತೆಗೆಯುವುದು, ಕಂದಾಯ ಇಲಾಖೆ ಮತ್ತು ಭೂಮಾಪನಾ ಇಲಾಖೆಯ ದಾಖಲೆಗಳ ತಾಳೆ ಮಾಡುವಂತೆ ಸಾವಿರಾರು ಭೂ ಹಿಡುವಳಿದಾರರು ಸಲ್ಲಿಸಿದ ಅರ್ಜಿ ನನೆಗುದಿಗೆ ಬಿದ್ದಿದೆ. ಈ ವಿಚಾರದಲ್ಲಿ ಸಂಘಸಂಸ್ಥೆಗಳ ಸಭೆ ನಡೆಸುವಂತೆ ಮನವಿ ಮಾಡಿದ ಅವರು, ಕಂದಾಯ ಇಲಾಖೆಯಲ್ಲಿ ಬಾಕಿಯಿರುವ ಕಡತಗಳ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಕೊಡಗು ಏಕೀಕರಣ ರಂಗದ ಸದಸ್ಯ ಮಂದಪಂಡ ಸತೀಶ್ ಅಪ್ಪಚ್ಚು ಸುದಿಗೋಷ್ಠಿಯಲ್ಲಿದ್ದರು.