ಮೇವಿಗಾಗಿ ಜಿಲ್ಲೆಯ ರೈತರ ಪರದಾಟ

| Published : Mar 08 2024, 01:45 AM IST

ಸಾರಾಂಶ

ವಿಜಯಪುರ: ಕುಡಿಯುವ ನೀರಾಯ್ತು, ಕೆಲಸವಿಲ್ಲದೇ ಜನರು ಗೂಳೆ ಹೋಗಿದ್ದಾಯ್ತು ಇದೀಗ ಪಂಚ ನದಿಗಳ ನಾಡಿನಲ್ಲಿ ದನಕರುಗಳಿಗೆ ಮೇವಿನದ್ದೆ ಸಮಸ್ಯೆಯಾಗಿದೆ. ಹಿಂದಿಗಿಂತಲೂ ಈ ಬಾರಿ ತೀವ್ರ ಬರ ಆವರಿಸಿರುವುದರಿಂದ ಬೆಳೆಗಳು ಸರಿಯಾಗಿ ಬೆಳೆದಿಲ್ಲ. ದವಸ-ಧಾನ್ಯಗಳಲ್ಲಿ ಕೊರತೆ ಕಾಡುತ್ತಿದೆ. ಮೇಲಾಗಿ ಜಾನುವಾರುಗಳಿಗೆ ನೀರು, ಮೇವು ಒದಗಿಸುವುದೇ ಈಗ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ತಮಗೆ ಆಧಾರವಾಗಿರುವ ದನಕರುಗಳನ್ನು ಕೈಗೆ ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಮಹಾರಾಷ್ಟ್ರ ಮತ್ತು ವಿಜಯಪುರ ಗಡಿಯಲ್ಲಿ ಜಾನುವಾರು ಹಾಗೂ ಮೇವು ಮಾರಾಟದ ಭರಾಟೆಯೂ ಜೋರಾಗಿದೆ.

ಬ್ಲರ್ಬ್.....

ಕುಡಿಯುವ ನೀರಾಯ್ತು, ಕೆಲಸವಿಲ್ಲದೇ ಜನರು ಗೂಳೆ ಹೋಗಿದ್ದಾಯ್ತು ಇದೀಗ ಪಂಚ ನದಿಗಳ ನಾಡಿನಲ್ಲಿ ದನಕರುಗಳಿಗೆ ಮೇವಿನದ್ದೆ ಸಮಸ್ಯೆಯಾಗಿದೆ. ಹಿಂದಿಗಿಂತಲೂ ಈ ಬಾರಿ ತೀವ್ರ ಬರ ಆವರಿಸಿರುವುದರಿಂದ ಬೆಳೆಗಳು ಸರಿಯಾಗಿ ಬೆಳೆದಿಲ್ಲ. ದವಸ-ಧಾನ್ಯಗಳಲ್ಲಿ ಕೊರತೆ ಕಾಡುತ್ತಿದೆ. ಮೇಲಾಗಿ ಜಾನುವಾರುಗಳಿಗೆ ನೀರು, ಮೇವು ಒದಗಿಸುವುದೇ ಈಗ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ತಮಗೆ ಆಧಾರವಾಗಿರುವ ದನಕರುಗಳನ್ನು ಕೈಗೆ ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಮಹಾರಾಷ್ಟ್ರ ಮತ್ತು ವಿಜಯಪುರ ಗಡಿಯಲ್ಲಿ ಜಾನುವಾರು ಹಾಗೂ ಮೇವು ಮಾರಾಟದ ಭರಾಟೆಯೂ ಜೋರಾಗಿದೆ.

----------

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಒಣಗಿರುವ ಡೋಣಿ ನದಿ, ಬತ್ತಿದ ಭೀಮೆಯ ಒಡಲು, ಖಾಲಿಯಾಗುತ್ತಿರುವ ಕೃಷ್ಣೆ. ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಮೂರು ನದಿಗಳ ಪರಿಸ್ಥಿತಿ ಇದು. ಈಗಾಗಲೇ ಡೋಣಿ ಹಾಗೂ ಭೀಮಾ ನದಿ ಸಂಪೂರ್ಣ ಒಣಗಿವೆ. ಕೃಷ್ಣೆಯಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಉಳಿದಿದೆ. ಅದರಲ್ಲೂ ಕೇವಲ 30 ಟಿಎಂಸಿ ಬಳಕೆಗೆ ನೀರು ಉಳಿದಿದೆ. ಆ ನೀರನ್ನು ಕುಡಿಯಲು ಮಾತ್ರ ಮೀಸಲಿಟ್ಟಿರುವುದರಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಿದಂತಾಗಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಇದ್ದ ಬಾವಿ, ಬೋರ್‌ವೆಲ್‌ಗಳೆಲ್ಲ ಬತ್ತಿವೆ. ಸಾವಿರ ಅಡಿ ಬೋರ್‌ವೆಲ್ ಕೊರೆದರೂ ಹನಿ ನೀರು ಸಿಗದಂತಾಗಿದೆ. ಇದರಿಂದ ಜನರು ಹಾಗೂ ರೈತರು ಜೀವನ ಸಾಗಿಸಲು ಪರದಾಡುವಂತಾಗಿದೆ. ಜಾನುವಾರುಗಳಿಗೆ ಹೊಟ್ಟು, ಒಣ ಮೇವಿಗೂ ಕೊರತೆ ಉಂಟಾಗಿದೆ. ಅನ್ನದಾತರಂತೂ ಜಾನುವಾರುಗಳಿಗೆ ನೀರು-ಮೇವು ಒದಗಿಸಲು ಸಾಧ್ಯವಾಗದೆ, ಎತ್ತು, ಆಕಳು, ಎಮ್ಮೆಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.

ಕಾಡುತ್ತಿದೆ ಮೇವಿನ ಕೊರತೆ:

ಜಿಲ್ಲೆಯಲ್ಲಿ ಎತ್ತು, ಆಕಳು, ಎಮ್ಮೆ ಸೇರಿದಂತೆ 3,79,129 ಜಾನುವಾರುಗಳು ಹಾಗೂ ಆಡು, ಕುರಿ, ಮೇಕೆ ಸೇರಿದಂತೆ 9,16,168 ಪ್ರಾಣಿಗಳಿವೆ. ಇವುಗಳಿಗೆ ಬೇಸಿಗೆಯಲ್ಲಿ ಮೇವಿಗೆ ಆಧಾರವಾಗಿದ್ದ ಜೋಳ, ಗೋಧಿ, ತೊಗರಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳಿಂದ ರೈತರು ಮೇವನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಜೋಳದ ಕಣಿಕೆ, ಸಜ್ಜೆ, ಮೆಕ್ಕೆಜೋಳ ಕಣಿಕೆಯು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದರಿಂದ ರೈತರಿಗೆ ಯಾವುದೇ ಚಿಂತೆ ಇರಲಿಲ್ಲ. ಈ ಬಾರಿ ಬೆಳೆಗಳು ಕೈಕೊಟ್ಟಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಮೇವಿನ ಕೊರತೆಯಾಗಿದೆ. ಈಗಾಗಲೇ ಜಿಲ್ಲೆಯ ತಿಕೋಟಾ, ದೇವರಹಿಪ್ಪರಗಿ, ಇಂಡಿ, ಸಿಂದಗಿ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಮೇವಿನ ಕೊರತೆ ಎದುರಾಗಿದೆ. ಜಾನುವಾರುಗಳ ನಿರ್ವಹಣೆ ಮಾಡಲಾಗದೆ ರೈತರು ಅನ್ಯ ರಾಜ್ಯಕ್ಕೆ ಹಾಗೂ ಕಸಾಯಿಖಾನೆಗಳಿಗೆ ಸಾಕು ಪ್ರಾಣಿಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಜೊತೆಗೆ ಇದ್ದಬದ್ದ ಮೇವನ್ನು ಸಹ ಹೆಚ್ಚಿನ ಬೆಲೆಗೆ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಅಂತಾರಾಜ್ಯಗಳಿಗೆ ಮೇವು ಮಾರಾಟ, ಸಾಗಾಟ ಮಾಡಲಾಗುತ್ತಿದೆ.

ಸರ್ಕಾರದ ಕ್ರಮಗಳೇನು?:

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3,79,126 ಜಾನುವಾರು ಹಾಗೂ 9,16,168 ಆಡು, ಕುರಿಗಳು ಇವೆ ಇವುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಲಾಗುತ್ತಿದೆ.

ಈಗಾಗಲೇ ಟೆಂಡರ್‌ ಕರೆದಿದ್ದು ತಿಕೋಟಾ ತಾಲೂಕಿನ ಟಕ್ಕಳಕಿ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತು ದೇವರ ಹಿಪ್ಪರಗಿಯಲ್ಲಿ ತುರ್ತಾಗಿ ಮೇವಿನ ಬ್ಯಾಂಕ್ ತೆರೆಯಲಾಗುತ್ತಿದೆ. ಮೇವು ಬ್ಯಾಂಕ್ ಗೆ ಟೆಂಡರ್ ಕರೆದು ಟೆಂಡರ್ ದಾರರ ಮುಖಾಂತರ ಪ್ರತಿ ಕೆಜಿ ಒಣ ಮೇವಿಗೆ ₹6 ರಂತೆ ಕೊಟ್ಟು ಖರೀದಿಸಿ ಜಾನುವಾರು ಸಾಕಾಣಿಕೆದಾರರಿಗೆ ₹2 ಗೆ ಒದಗಿಸುವುದು, ಭೂ ರಹಿತರಿಗಾಗಿ ಒಣ ಮೇವಿನ(ಜೋಳದ ಕಣಿಕೆ) ವ್ಯವಸ್ಥೆ ಮಾಡಲಾಗಿದ್ದು, ಒಂದು ದಿನಕ್ಕೆ ಒಂದು ಜಾನುವಾರಿಗೆ 6 ಕೆಜಿ ಮೇವು ಮಾತ್ರ ಕೊಡಲಾಗುವುದು. ವಿಜಯಪುರ ಜಿಲ್ಲೆಯಿಂದ ಮೇವು ಹೊರಗೆ ಹೋಗಬಾರದು ಎಂದು ಮೇವು ಮಾರಾಟ ಮಾಡುವುದು, ಸಾಗಾಟ ಮಾಡುವುದಕ್ಕೆ ನಿರ್ಭಂದ ಹೇರಲಾಗಿದೆ. ಜಿಲ್ಲೆಯ ಹೊನವಾಡ, ಅರಕೇರಿ, ಯತ್ನಾಳ, ಕನಮಡಿ, ಶಿರಾಡೋಣ, ಧೂಳಖೇಡ ಈ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಪಶು ಸಂಗೋಪನಾ ಇಲಾಖೆಯಿಂದ ಪೊಲೀಸ್ ಇಲಾಖೆ ಸಹಯೋಗದಲ್ಲಿ ಚೆಕಪೋಸ್ಟ್ ನಿರ್ಮಾಣ ಮಾಡಲಾಗಿದೆ. ಸರ್ಕಾರದ ಒಂದು ಗೋಶಾಲೆ ಇದ್ದು, ಅಲ್ಲಿ ಈಗಾಗಲೇ ಮೂರು ತಿಂಗಳಿಗೆ ಆಗುವಷ್ಟು ಮೇವಿನ ಸಂಗ್ರಹ ಮಾಡಿಕೊಳ್ಳಲಾಗಿದೆ.ಈ ಬಾರಿಯ ಬರ ನಮ್ಮ ಜಾನುವಾರುಗಳಿಗೆ ಮೇವು, ನೀರು ಇಲ್ಲದಂತೆ ಮಾಡಿದ್ದು, ಕುಟುಂಬದ ಖರ್ಚು ವೆಚ್ಚ ನಿರ್ವಹಣೆ ಹಾಗೂ ಜಾನುವಾರು ನಿಭಾಯಿಸುವುದು ಕಷ್ಟವಾಗ್ತಿದೆ. ತಕ್ಷಣದಲ್ಲಿ ಎಲ್ಲ ತಾಲೂಕುಗಳಲ್ಲಿ ಮೇವು ಬ್ಯಾಂಕ್ ಆರಂಭಿಸಿ, ಬೇಸಿಯಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿದೆ.

ರಮೇಶ ಬಿರಾದಾರ, ರೈತ.

ಖಾಸಗಿಯಾಗಿ ನಾಲ್ಕು ಗೋಶಾಲೆಗಳಿದ್ದು, ಅವರು ಮೇವು ಸಂಗ್ರಹಿಸಿಕೊಂಡಿದ್ದಾರೆ. ಇನ್ನು ಜಿಲ್ಲೆಯಲ್ಲಿರುವ ಜಾನುವಾರುಗಳಿಗಾಗಿ ಈಗಾಗಲೇ ರೈತರು ಕೆಲವು ಕಡೆ ಮೇವಿನ ಬೇಡಿಕೆ ಇಟ್ಟಿದ್ದಾರೆ. ಭೂ ರಹಿತರಿಗಾಗಿ ಮೇವಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ತಿಕೋಟಾ ಹಾಗೂ ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಮೇವು ಬ್ಯಾಂಕ್ ಆರಂಭವಾಗಲಿವೆ. ಅವಶ್ಯಕತೆ ಬಿದ್ದರೆ ಹಂತಹಂತವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗುವುದು.

- ಡಾ.ಅಶೋಕ ಘೊಣಸಗಿ, ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ.