ರಾಜ್ಯ ಸರ್ಕಾರ ವಡ್ಡರಹಳ್ಳಿ ಸಮೀಪ ಎತ್ತಿನಹೊಳೆ ಬಫರ್ ಡ್ಯಾಂ ನಿರ್ಮಾಣ ಮಾಡುವುದನ್ನು ವಿರೋಧಿಸಿ ರೈತರು ಮಿನಿವಿಧಾನ ಸೌಧಕ್ಕೆ ಮುತ್ತಿಗೆಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯ ಸರ್ಕಾರ ವಡ್ಡರಹಳ್ಳಿ ಸಮೀಪ ಎತ್ತಿನಹೊಳೆ ಬಫರ್ ಡ್ಯಾಂ ನಿರ್ಮಾಣ ಮಾಡುವುದನ್ನು ವಿರೋಧಿಸಿ ರೈತರು ಮಿನಿವಿಧಾನ ಸೌಧಕ್ಕೆ ಮುತ್ತಿಗೆಹಾಕಿ ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಪುರಸಭೆ ಮುಂಭಾಗದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿದ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ವಡೇರಹಳ್ಳಿ ರೈತ ಮುಖಂಡ ವಿ.ಪಿ.ನಂಜೇಗೌಡ, ವಡ್ಡರಹಳ್ಳಿ ಬಳಿ ನಿರ್ಮಾಣಕ್ಕೆ ಉದ್ದೇಶ ಮಾಡಿರುವ ಎತ್ತಿನಹೊಳೆ ಯೋಜನೆಯ ಬಫರ್‌ಡ್ಯಾಂ ಅವೈಜ್ಞಾನಿಕ. ನಾವು ನಮ್ಮ ಪ್ರಾಣ ಬೇಕಾದ್ರು ನೀಡ್ತಿವಿ ಆದರೆ ನಮ್ಮ ಕೃಷಿ ಜಮೀನು ಮಾತ್ರ ಬಫರ್‌ಡ್ಯಾಂಗೆ ನೀಡೋದಿಲ್ಲ. ರಾಜ್ಯ ಸರ್ಕಾರ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.

ರೈತ ಮುಖಂಡ ಡಿ.ಹನುಮಂತೇಗೌಡ ಮಾತನಾಡಿ, ದುರ್ಗದಹಳ್ಳಿ, ಬೈರಗೊಂಡ್ಲು ಆಯ್ತು ಈಗ ನಮ್ಮ ವಡೇರಹಳ್ಳಿಗೆ ಬಫರ್‌ಡ್ಯಾಂ ಬಂದಿದೆ. ರೈತರ ಪರವಾನಗಿ ಪಡೆಯದೆ ಏಕಾಏಕಿ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ನಮ್ಮ ಭೂಮಿ ವಿಚಾರಕ್ಕೆ ಬಂದು ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಈಗಾಗಲೇ ಸಾಕಷ್ಟು ಜಮೀನಿನನ್ನು ಸರ್ಕಾರ ಕಿತ್ತುಕೊಂಡಿದೆ ಮುಂದೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ವಡೇರಹಳ್ಳಿ, ನಾಯಕನಪಾಳ್ಯ, ಕಾಟೇನಹಳ್ಳಿ ರೈತರಾದ ಕೆಂಪರಾಜು, ನಂಜುಂಡಯ್ಯ, ವೀರಭದ್ರಯ್ಯ, ಲಕ್ಕಹನುಮಯ್ಯ, ಜಯಣ್ಣ, ಮಾರುತಿ, ಸುಜಾತ, ವಿನೂತ, ಜಯಮ್ಮ, ಗಂಗಮ್ಮ, ಲಕ್ಷಮ್ಮ ಸೇರಿದಂತೆ ಇತರರು ಇದ್ದರು.