ಕೋವಿ ಠೇವಣಿಗೆ ರೈತರ ವಿರೋಧ: ‘ತೋಟ ರಕ್ಷಣೆಗೆ ಪೊಲೀಸ್‌ ನೇಮಿಸಿ’ ಅಭಿಯಾನ

| Published : Apr 11 2024, 12:47 AM IST

ಕೋವಿ ಠೇವಣಿಗೆ ರೈತರ ವಿರೋಧ: ‘ತೋಟ ರಕ್ಷಣೆಗೆ ಪೊಲೀಸ್‌ ನೇಮಿಸಿ’ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯ ರೈತರು ತಮ್ಮ ತೋಟಗಳಿಗೆ ಮಂಗ ಹಾಗೂ ಕಾಡು ಪ್ರಾಣಿಗಳಿಂದ ತೊಂದರೆ ಯಾದರೆ ತಕ್ಷಣ ತುರ್ತುಸೇವೆ (೧೧೨) ಗೆ ಪೋನ್ ಮಾಡುವ ಅಭಿಯಾನ ನಡೆಸಲಿದ್ದಾರೆ. ಕೋವಿ ಠೇವಣಿ ಇಡುತ್ತೇವೆ. ಆದರೆ ‘ತೋಟ ರಕ್ಷಣೆಗೆ ಪೊಲೀಸರನ್ನು ನೇಮಕ ಮಾಡಿ’ ಎಂಬ ಘೋಷಣೆಯೊಂದಿಗೆ ಫೋನ್ ಅಭಿಯಾನ ನಡೆಸಲಾಗುವುದು ಎಂದು ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ರೈತರ ಕೃಷಿ ರಕ್ಷಣೆಗಾಗಿ ನೀಡಲಾದ ಕೋವಿಗಳನ್ನು ಚುನಾವಣೆ ಬಂದಾಗಲೆಲ್ಲಾ ಪೊಲೀಸ್ ಠಾಣೆಯಲ್ಲಿ ಇಡುವ ಕ್ರಮ ಅತ್ಯಂತ ಅರ್ಥಹೀನವಾಗಿದ್ದು, ಜಿಲ್ಲೆಯ ಇತಿಹಾಸ ಹುಡುಕಿದರೂ ಚುನಾವಣೆ ಸಂದರ್ಭ ಯಾವುದೇ ರೈತನ ಕೋವಿಯಿಂದ ಅನಾಹುತ ನಡೆದ ಉದಾಹರಣೆಗಳಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲೆಯ ರೈತರು ತಮ್ಮ ತೋಟಗಳಿಗೆ ಮಂಗ ಹಾಗೂ ಕಾಡು ಪ್ರಾಣಿಗಳಿಂದ ತೊಂದರೆ ಯಾದರೆ ತಕ್ಷಣ ತುರ್ತುಸೇವೆ (೧೧೨) ಗೆ ಪೋನ್ ಮಾಡುವ ಅಭಿಯಾನ ನಡೆಸಲಾಗುವುದು. ‘ಕೋವಿ ಠೇವಣಿ ಇಡುತ್ತೇವೆ. ಆದರೆ ‘ತೋಟ ರಕ್ಷಣೆಗೆ ಪೊಲೀಸರನ್ನು ನೇಮಕ ಮಾಡಿ’ ಎಂಬ ಘೋಷಣೆಯೊಂದಿಗೆ ಫೋನ್ ಅಭಿಯಾನ ನಡೆಸಲಾಗುವುದು ಎಂದು ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ರೈತರ ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಡಬೇಕು. ನಂತರ ಮೂರು ತಿಂಗಳ ಬಳಿಕ ಕೋವಿಗಳು ರೈತರ ಕೈಗೆ ಸಿಗುತ್ತದೆ. ಎಷ್ಟೋ ಸಂದರ್ಭದಲ್ಲಿ ಈ ಕೋವಿಗಳು ಜಖಂಗೊಂಡಿರುತ್ತದೆ. ಚುನಾವಣಾ ಆಯೋಗದ ನಿಯಮದಂತೆ ನಾವು ಮಾಡುತ್ತಿದ್ದೇವೆ ಎಂಬುವುದು ಜಿಲ್ಲಾಡಳಿತದ ಮಾತು. ಆದರೆ ರೈತರ ಕೋವಿಗಳಿಂದ ಯಾವ ಅನಾಹುತ ನಡೆದಿದೆ ಎಂಬುವುದನ್ನು ಸಮಿತಿ ರಚನೆ ಮಾಡಿ ಸಮೀಕ್ಷೆ ನಡೆಸಲಿ ಎಂದು ಆಗ್ರಹಿಸಿದರು.ಸಮಾಜಘಾತುಕರ ಕೋವಿಗಳನ್ನು ಠೇವಣಿ ಮಾಡುವುದು ಬೇಡ ಎಂಬುವುದು ನಮ್ಮ ವಾದವಲ್ಲ. ಆದರೆ ಕೃಷಿ ಕಾರ್ಯ ನಡೆಸುತ್ತಾ ಯಾವುದೇ ಸಮಸ್ಯೆಗೂ ಕಾರಣವಾಗದ ರೈತರ ಕೋವಿಗಳಿಗೆ ರಿಯಾಯತಿ ನೀಡಿ ಎನ್ನುವುದು ನಮ್ಮ ವಾದವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ರೈತ ಸಂಘ ಮತ್ತು ಪರವಾನಿಗೆ ಹೊಂದಿರುವ ಕೋವಿ ಬಳಕೆದಾರರ ಸಂಘ ಜಂಟಿಯಾಗಿ ರೈತರ ಕೋವಿಗಳಿಗೆ ವಿನಾಯತಿ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ಮೆಟ್ಟಲು ಏರಲು ತೀರ್ಮಾನಿಸಲಾಗಿದೆ. ರೈತರ ಕೃಷಿ ಜಮೀನಿಗೆ ದಾಳಿ ಮಾಡುವ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಕೇರಳ ಸರ್ಕಾರದ ಮಾದರಿಯನ್ನು ಜಿಲ್ಲೆಗೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ ಅವರು ರೈತರಿಗೆ ಯಾವುದೇ ವಿನಾಯಿತಿ ನೀಡದೆ ಎ.೧ ನಂತರ ಕೋವಿಗಳನ್ನು ಡೆಪಾಸಿಟ್ ಮಾಡಬೇಕು ಎಂದು ಸೂಚನೆ ನೀಡಿದ್ದರೂ ಪೊಲೀಸ್ ಇಲಾಖೆ ಮಾ.೨೦ರೊಳಗೆ ಕೋವಿಗಳನ್ನು ಡೆಪಾಸಿಟ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ರೈತರ ಕೋವಿ ಡಿಪಾಸಿಟ್ ಇಡುವುದರಿಂದ ರೈತರಿಗೆ ಸಮಸ್ಯೆಯಗುತ್ತಿರುವ ಬಗ್ಗೆ ರೈತ ಸಂಘ ವತಿಯಿಂದ ಈಗಾಗಲೇ ಆಗುತ್ತಿರುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಿದರೂ ಇನ್ನು ಸರ್ಕಾರ ಎಚ್ಚತ್ತು ಕೊಂಡಂತೆ ಕಾಣುತ್ತಿಲ್ಲ.ಹಾಗಾಗಿ ನ್ಯಾಯಾಲಯಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಹಂದಿ ದಾಳಿಗೆ ಯಾರು ಹೊಣೆ?:

ಕೋವಿ ಡೆಪಾಸಿಟ್ ಮಾಡಿದ್ದರ ಪರಿಣಾಮ ಅವಿಭಜಿತ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ವ್ಯಕ್ತಿಯೊಬ್ಬರು ಕಾಡು ಹಂದಿ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಗರಿ ನಿವಾಸಿ ರತ್ನಾಕರ ಸುವರ್ಣ ಭಾನುವಾರ ಮಧ್ಯಾಹ್ನ ಕೃಷಿಗೆ ನೀರು ಹಾಯಿಸಲು ಹೋದ ಸಂದರ್ಭ ಕಾಡು ಹಂದಿಯ ದಾಳಿಗೆ ಸಿಲುಕಿದ್ದಾರೆ. ಇದೀಗ ಈ ಘಟನೆಯ ಹೊಣೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ಹೊರಬೇಕು. ಅವರ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು. ಕೋವಿ ಡೆಪಾಸಿಟ್ ಇಟ್ಟು ರೈತರು ಇಂತಹ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂಬುವುದು ಅರ್ಥವಾಗದ ಅಧಿಕಾರಿಗಳು ಜಿಲ್ಲೆಯಲ್ಲಿದ್ದು, ಮುಂದೆ ಇಂತಹ ಘಟನೆಗಳು ನಡೆದರೆ ಅದಕ್ಕೆ ಯಾರು ಹೊಣೆ ಎಂಬುವುದನ್ನು ಜಿಲ್ಲಾಡಳಿತ ಹೇಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಇಂತಹ ಘಟನೆಗಳ ಬಗ್ಗೆ ಜಿಲ್ಲಾಧಿಕಾರಿ ಅವರ ಮೊಬೈಲ್ ಗೆ ಪೋನ್ ಮಾಡಿದರೆ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿ ಅವರು ಕೂಡಾ ರೈತರೊಂದಿಗೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಾರೆ. ಸಮಸ್ಯೆ ಹೇಳಿದರೆ ನಿಮ್ಮ ಕೋವಿ ಲೈಸೆನ್ಸ್ ರದ್ದು ಮಾಡುತ್ತೇನೆ ಎಂಬ ಅಹಂಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಅವರು ಹೇಳಿದರು.

ಸುದ್ಧಿಗೋಷ್ಟಿಯಲ್ಲಿ ರೈತ ಮುಖಂಡರಾದ ಶಿವಣ್ಣ ಗೌಡ ಇಡ್ಯಾಡಿ, ಹೊನ್ನಪ್ಪ ಗೌಡ, ಪ್ರವೀಣ್ ಕುಮಾರ್ ಕಡೆಂಜಿ ಹಾಗೂ ಶಿವಚಂದ್ರ ಇದ್ದರು.