ಕನಕಪುರ: ತಾಲೂಕಿನಲ್ಲಿ ಸರ್ಕಾರಿ ಗೋಮಾಳಗಳ ಲೂಟಿ, ಕಾಡಾನೆಗಳ ಹಾವಳಿ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರವನ್ನು ಖಂಡಿಸಿ ರಾಜ್ಯ ರೈತ ಸಂಘ ಗ್ರಾಮಾಭಿವೃದ್ಧಿ ಘಟಕದ ತಾಲೂಕು ಅಧ್ಯಕ್ಷ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ದಿಂಬದಹಳ್ಳಿ ಹೊರ ವಲಯದಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ.ನಂಜುಂಡಸ್ವಾಮಿಯವರ ಜನ್ಮ ದಿನಾಚರಣೆ ಹಾಗೂ ರೈತರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಧ್ವಂದ್ವ ನೀತಿಗಳಿಂದಾಗಿ ರೈತರ ಬದುಕು ಬರ್ಬರವಾಗಿದೆ. ಆದ್ದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತರು ಸಂಘಟಿತರಾಗಬೇಕೆಂದು ಕರೆ ನೀಡಿದರು.
ದಿಂಬದಹಳ್ಳಿ ಮುಖಂಡ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಕೆರೆಕುಂಟೆಗಳು ಕಡಿಮೆಯಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಸರ್ಕಾರ ರೈತರ ಸಂಕಷ್ಟಗಳನ್ನು ಕೇಳದೆ ಕಣ್ಮುಚ್ಚಿ ಕುಳಿತಿದೆ. ವಿಶೇಷವಾಗಿ ಈ ಹಿಂದೆ ಜನ-ಜಾನುವಾರುಗಳಿಗೆ ಮೀಸಲಿಟ್ಟಿದ್ದ ಸರ್ಕಾರಿ ಗೋಮಾಳವನ್ನು ಪ್ರಭಾವಿತರಿಗೆ ಬಗರ್‌ಹುಕುಂ ಸಾಗುವಳಿಯನ್ನು ನಿಯಮ ಬಾಹಿರವಾಗಿದೆ ಮಂಜೂರು ಮಾಡಲಾಗುತ್ತಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಾಗಿ ಗೋಮಾಳ ಮಂಜೂರಾತಿಗೆ ತಡೆ ನೀಡಿದೆ. ಪ್ರಭಾವಿಗಳ ಒಳ ಸಂಚಿನಿಂದ ನಕಲಿ ದಾಖಲೆ ಸೃಷ್ಟಿಸಿ ಅನರ್ಹರು ಕೂಡ ಭೂಮಂಜೂರಾತಿ ಪಡೆಯುತ್ತಿದ್ದಾರೆ. ಪ್ರತಿ ಎಕರೆ ಜಮೀನಿಗೆ ಮಂಜೂರಾತಿಗೆ ಬಡ ರೈತರು ಪರದಾಡಬೇಕಿದೆ, ಇಂತಹ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.ಜಿಲ್ಲಾಧ್ಯಕ್ಷ ದೇವರಾಜು ಮಾತನಾಡಿ, ಕಾಡಂಚಿನಲ್ಲಿರುವ ಬಹುತೇಕ ಗ್ರಾಮಗಳಲ್ಲಿ ಜನರ ಜೀವ ಮತ್ತು ಆಸ್ತಿಗೆ ರಕ್ಷಣೆ ಇಲ್ಲದಂತಾಗಿದೆ. ವನ್ಯಜೀವಿಗಳ ಹಾವಳಿಗೆ ಬೆಳೆ ನಾಶವಾಗುತ್ತಿದೆ. ಇತ್ತೀಚೆಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಆನೆಗಳು ಮುರಿದು ಗ್ರಾಮಗಳಿಗೆ ನುಗ್ಗಿ ರೈತರನ್ನು ಕೊಲ್ಲುತ್ತಿವೆ. ಸತ್ತ ರೈತ ಕುಟುಂಬಕ್ಕೆ ಸರ್ಕಾರ 15 ಲಕ್ಷ ರು. ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ನಾಶವಾದ ಬೆಳೆ, ಮುರಿದು ಬಿದ್ದ ಮನೆ, ಸತ್ತ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾರೋಹಳ್ಳಿ ತಾಲೂಕು ಅಧ್ಯಕ್ಷ ಪ್ರಕಾಶ್, ಮುಖಂಡರಾದ ನರಸಿಂಹಯ್ಯ, ಮರಳವಾಡಿ ವೆಂಕಟೇಶ್, ವಕೀಲ ಕೆಂಪೇಗೌಡ, ಬಸವರಾಜು ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ವೆಂಕಟಾಚಲ, ಮರಳವಾಡಿ ಕಾರ್ಯದರ್ಶಿ ರವಿ, ಲೋಕೇಶ್, ಸಾಕಮ್ಮ, ನಾಗಮ್ಮ, ಚಾಮಯ್ಯ, ಮಹದೇವಯ್ಯ, ಶಿವಕುಮಾರ್ ಇತರರು ಭಾಗವಹಿಸಿದ್ದರು.ಕೆಕೆಪಿ ಸುದ್ದಿ 01:
ಕನಕಪುರ ತಾಲೂಕಿನ ದಿಂಬದಹಳ್ಳಿಯಲ್ಲಿ ರಾಜ್ಯ ರೈತ ಸಂಘದ ಗ್ರಾಮಾಭಿವೃದ್ಧಿ ಘಟಕದಿಂದ ಜರುಗಿದ ರೈತರ ಜಾಗೃತಿ ಸಭೆಯಲ್ಲಿ ದೇವರಾಜು, ಸತೀಶ್, ರಮೇಶ್, ಲೋಕೇಶ್, ಸಾಕಮ್ಮ, ಗೌರಮ್ಮ ಉಪಸ್ಥಿತರಿದ್ದರು.