ಸಾರಾಂಶ
ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ ವಿಮಾ ಕಂಪನಿಗೆ ಎರಡು ಕೋಟಿಗಿಂತ ಹೆಚ್ಚು ಹಣ ಪಾವತಿ ಮಾಡಿರುವ ಯೂನಿಯನ್ ಬ್ಯಾಂಕ್ (ಅಡಗಳಲೇ) ಸುಳ್ಳಳ್ಳಿ ಶಾಖೆಯ ವಿರುದ್ಧ ರೈತರು ಪ್ರತಿಭಟನೆ ನಡೆಸಿ, ಕೆಲ ಕಾಲ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸುಳ್ಳಳ್ಳಿಯಲ್ಲಿ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಬ್ಯಾಕೋಡು
ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ ವಿಮಾ ಕಂಪನಿಗೆ ಎರಡು ಕೋಟಿಗಿಂತ ಹೆಚ್ಚು ಹಣ ಪಾವತಿ ಮಾಡಿರುವ ಯೂನಿಯನ್ ಬ್ಯಾಂಕ್ (ಅಡಗಳಲೇ) ಸುಳ್ಳಳ್ಳಿ ಶಾಖೆಯ ವಿರುದ್ಧ ರೈತರು ಪ್ರತಿಭಟನೆ ನಡೆಸಿ, ಕೆಲ ಕಾಲ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸುಳ್ಳಳ್ಳಿಯಲ್ಲಿ ಬುಧವಾರ ನಡೆಯಿತು.ನೂರಕ್ಕೂ ಹೆಚ್ಚು ರೈತರು ಯುನಿಯನ್ ಬ್ಯಾಂಕ್ ಶಾಖೆ ಎದುರು ಜಮಾವಣೆಗೊಂಡು ಕೃಷಿ ಸಾಲ ನೀಡುವಾಗ ವಿಮಾ ಕಂಪನಿಯ ಬಾಂಡ್ ಪಡೆಯುವುದು ಅನಿವಾರ್ಯ ಎಂದು ಷರತ್ತು ವಿಧಿಸಿ ರೈತರಿಗೆ ದಿಕ್ಕು ತಪ್ಪಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಾ ಇರುವ ಮ್ಯಾನೇಜರ್, ವಿಮಾ ಕಂಪನಿ ಜತೆ ಲಾಭದ ಆಸೆಗೆ ಬಿದ್ದು ಈ ಕೃತ್ಯ ಎಸಗಿದ್ದು, ತಪ್ಪಿತಸ್ಥ ಮ್ಯಾನೇಜರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ರೈತರು ಆಕ್ರೋಶ ಹೊರಹಾಕಿದರು.ಹೆಚ್ಚಿನ ರೈತರಿಗೆ ವಿಮೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೆಚ್ಚುವರಿ ಸಾಲ ಮಂಜೂರಾತಿ ಮಾಡಿ ಗಮನಕ್ಕೆ ತಾರದೆ ಮೊದಲ ಕಂತನ್ನು ಪಾವತಿ ಮಾಡಲಾಗಿದೆ. ಈಗ ಎರಡನೇ ಕಂತು ಸ್ವಯಂ ಚಾಲಿತವಾಗಿಯೇ ವಿಮಾ ಕಂಪನಿಗೆ ಪಾವತಿ ಆಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಕ್ಕಿಸಿದೆ ಎಂದು ತಮ್ಮ ಕಷ್ಟಗಳನ್ನು ವಿವರಿಸಿದರು.
ಸ್ಥಳಕ್ಕೆ ಆಗಮಿಸಿದ ಕೆಡಿಪಿ ಸದಸ್ಯ ಜಿಟಿ. ಸತ್ಯನಾರಾಯಣ, ಕರೂರು ರೈತ ಮುಖಂಡರ ಜತೆ ಸಮಾಲೋಚನೆ ಮಾಡಿ, ಯುನಿಯನ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕ ಮಾಡಿ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರೈತರ ಖಾತೆಗಳಿಂದ ವಿಮಾ ಕಂಪನಿಗೆ ಪುನಃ ಹಣ ಪಾವತಿ ಮಾಡಬಾರದು. ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಮತ್ತು ಹಣ ಮರುಪಾವತಿಗೆ ವಿನಂತಿಸಿದ ಮನವಿ ಪತ್ರವನ್ನ ಸ್ಥಳದಲ್ಲಿ ಹಾಜರಿದ್ದ ಈಗಿನ ವ್ಯವಸ್ಥಾಪಕರಿಗೆ ನೀಡಲಾಯಿತು.ಪ್ರತಿಭಟನೆಯಲ್ಲಿ ಮುಖಂಡರಾದ ವಿಜಯಕುಮಾರ್ ಹೇರಬೆಟ್ಟು, ಲೋಕೇಶ್ ಹಳ್ಳಿ, ಯುವ ಮುಖಂಡ ಆನಂದ್ ಬಾಳ , ಕೊಲ್ಲನಾಯ್ಕ ಗೋಳಗೋಡ, ಮತ್ತಿತರರು ಪಾಲ್ಗೊಂಡಿದ್ದರು.