ಮೆಕ್ಕೆಜೋಳ ಬೆಳೆ ಕಟಾವು ಪ್ರಯೋಗದಲ್ಲಿ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ಎಸಗಿರುವ ಲೋಪ ಸರಿಪಡಿಸುವಂತೆ ಆಗ್ರಹಿಸಿ ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ಕೊಪ್ಪಳ: ಮೆಕ್ಕೆಜೋಳ ಬೆಳೆ ಕಟಾವು ಪ್ರಯೋಗದಲ್ಲಿ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ಎಸಗಿರುವ ಲೋಪ ಸರಿಪಡಿಸುವಂತೆ ಆಗ್ರಹಿಸಿ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ರೈತರು ಮರು ಸಮೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, 15 ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಡಿ. 1ರಂದು ಗ್ರಾಮ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.2026-27ನೇ ಸಾಲಿನ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬೆಳೆ ಕಟಾವು ಪ್ರಯೋಗವನ್ನು ಬೆಟಗೇರಿ ಗ್ರಾಮದಲ್ಲಿ ನಡೆಸುವ ಸಂದರ್ಭದಲ್ಲಿ ಕಂದಾಯ, ಕೃಷಿ, ಪಂಚಾಯಿತಿ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ರೈತರ ಪ್ರಮುಖ ಆರೋಪ. ಆಯ್ದ ಕೆಲವು ಸರ್ವೆ ನಂಬರ್ಗಳಲ್ಲಿ ಮಾತ್ರ ಕಾಟಾಚಾರಕ್ಕೆ ಪ್ರಯೋಗ ನಡೆಸಿ, ನೈಜ ಬೆಳೆ ನಷ್ಟದ ಪ್ರಮಾಣವನ್ನು ಸರಿಯಾಗಿ ದಾಖಲಿಸಿಲ್ಲ. ಇದರಿಂದ ನಷ್ಟ ಅನುಭವಿಸಿದ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೊರೆಯಬೇಕಾದ ಪರಿಹಾರದಲ್ಲಿ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ರೈತರು ದೂರಿದ್ದಾರೆ.
ಈ ಕುರಿತು ಅ. 20 ಮತ್ತು ನ. 3ರಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮರು ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಅ. 14 ಮತ್ತು ಅ. 16ರಂದು ನಡೆದ ಬೆಳೆ ಕಟಾವು ಪ್ರಯೋಗಗಳಲ್ಲಿಯೂ ಹಲವು ಲೋಪದೋಷಗಳು ಕಂಡುಬಂದಿವೆ. ರೈತರು ಈ ಬಗ್ಗೆ ಗಮನ ಸೆಳೆದರೂ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಬದಲು ತಮ್ಮ ನಿರ್ಧಾರಗಳನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಮಳೆ ವೈಫಲ್ಯ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ಪರಿಹಾರವೂ ದೊರೆಯದಿದ್ದರೆ ರೈತರ ಬದುಕು ಮತ್ತಷ್ಟು ದುಸ್ತರವಾಗಲಿದೆ. ಹೀಗಾಗಿ ಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ಕಟಾವು ಪ್ರಯೋಗಗಳ ಲೋಪಗಳನ್ನು ಸಮಗ್ರವಾಗಿ ಪರಿಶೀಲಿಸಿ, ನೈಜ ಬೆಳೆ ನಷ್ಟದ ಆಧಾರದ ಮೇಲೆ ಮರು ಸಮೀಕ್ಷೆ ನಡೆಸಬೇಕು. ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಬೇಕು ಹಾಗೂ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಲ್ಕು ಪ್ಲಾಟ್ಗಳ ಮರು ಸಮೀಕ್ಷೆಗೆ ಪಟ್ಟು: ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ಆಗಮಿಸಿ ರೈತರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಪ್ಲಾಟ್ಗಳಲ್ಲಿ ಪುನಃ ಬೆಳೆ ಕಟಾವು ಪ್ರಯೋಗ ನಡೆಸಿ ಸಮೀಕ್ಷೆ ಮಾಡಬೇಕು ಎಂದು ರೈತರು ಪಟ್ಟುಹಿಡಿದರು. ಆದರೆ ಅಧಿಕಾರಿಗಳು ಕೇವಲ ಒಂದು ಪ್ಲಾಟ್ನಲ್ಲಿ ಮಾತ್ರ ಮರು ಸಮೀಕ್ಷೆ ನಡೆಸಲು ಆದೇಶಿಸಿರುವುದಾಗಿ ತಿಳಿಸಿದರು. ಇದಕ್ಕೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇದೇ ವೇಳೆ ವಿಮಾ ಕಂಪನಿ ಪ್ರತಿನಿಧಿಗಳು ದಾಖಲೆಗಳನ್ನು ತೆಗೆದುಕೊಂಡು ಯಾವುದೇ ದಾಖಲೆಗಳಿಗೆ ಸಹಿ ಹಾಕದೆ ಸ್ಥಳದಿಂದ ನಿರ್ಗಮಿಸಿದರು ಎಂದು ರೈತರು ಆರೋಪಿಸಿದರು.
ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ: ರೈತರ ಪ್ರತಿಭಟನೆಗೆ ಬೆಟಗೇರಿ ಗ್ರಾಮದ ವಿವಿಧ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದರು. ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಸಮಸ್ಯೆ ಬಗೆಹರಿಯುವವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಬೆಳೆ ಕಟಾವು ಪ್ರಯೋಗ ನಡೆಸಲು ಅವಕಾಶ ನೀಡುವುದಿಲ್ಲ. 15 ದಿನಗಳೊಳಗೆ ನಾಲ್ಕು ಪ್ಲಾಟ್ಗಳ ಮರು ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಡಿ. 1ರಂದು ಬೆಟಗೇರಿ ಗ್ರಾಮ ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೀರೇಶ ಸಜ್ಜನ, ನಾರಾಯಣಪ್ಪ ಚಿಂಚಲಿ, ಪ್ರದೀಪ ಯತ್ನಳ್ಳಿ, ಪ್ರಕಾಶ ಕೊಪ್ಪಳ, ಕೊಟ್ರೇಶ ಹಡಪದ, ನಾರಾಯಣಪ್ಪ ಕೊರಣ್ಣವರ್, ನಾರಾಯಣಪ್ಪ ಮತ್ತೂರು, ವಿಜಯ ಬಿಸರಳ್ಳಿ, ಶರಣಪ್ಪ ಮತ್ತೂರು, ಹನುಮಂತ ರೆಡ್ಡಿ ಬೆಲ್ಲಡಗಿ, ಬಸವರಾಜ ನಾಗರಡ್ಡಿ, ಸುರೇಶ ಸಜ್ಜನ, ಪ್ರಶಾಂತ, ಭರಮಪ್ಪ ಕಂಬಳಿ, ಶಂಕ್ರಪ್ಪ ಮತ್ತೂರು, ಏಳುಕೋಟೇಶ ಕೊಮಲಾಪುರ, ಶಿವಕುಮಾರ್ ಮೇಟಿ, ಗವಿಸಿದ್ದಪ್ಪ ಮಾಳೆಕೊಪ್ಪ, ವೀರೇಶ ಲಕ್ಷಾಣಿ, ಭೀಮಣ್ಣ ಕವಲೂರು, ಹನುಮಂತಪ್ಪ ಆರೇರ, ಜಗದೀಶ ಗುನ್ನಾಳ, ವಿನೋದ ಯತ್ನಳ್ಳಿ ಸೇರಿದಂತೆ ಗ್ರಾಮದ ರೈತರು ಪಾಲ್ಗೊಂಡಿದ್ದರು.