ಸಾರಾಂಶ
ಪ್ರತಿ ದಿನವು 28ರಿಂದ 30 ಕೊಳವೆ ಬಾವಿಗಳ ಕೊರೆವ ಲಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಅಡಿಗೆ ₹ 100ಯಿಂದ ₹120 ಆದರೆ, ಸಾವಿರ ಅಡಿಯ ನಂತರ ಕೊರೆಸಿದರೆ ಒಂದು ಅಡಿಗೆ ₹250ರಿಂದ 350ರು.ಗಳ ಕೊಡಬೇಕಿದೆ. ಕೆಲವು ರೈತರು ಈಗಾಗಲೇ ಟ್ಯಾಂಕರ್ ಗಳ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದು, ಒಂದು ಟ್ಯಾಂಕರ್ ನೀರಿಗೆ ₹1,400ರಿಂದ 1,500 ರುಪಾಯಿ ಕೊಟ್ಟು ಅಡಿಕೆ ಗಿಡಗಳಿಗೆ ನೀರುಣಿಸುವ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಬಿಸಿಲಿನ ತಾಪ ಹೆಚ್ಚಳದಿಂದ ಅಂತರ್ಜಲ ಮಟ್ಟವು ದಿನದಿಂದ ದಿನಕ್ಕೆ ಕುಸಿದು, ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. ಅಡಿಕೆ ತೋಟಗಳು ಒಣಗುತ್ತಿರುವುದು ಕಂಡು ರೈತರು ಕಂಗಾಲಾಗಿದ್ದಾರೆ.ತಾಲೂಕಿನಲ್ಲಿ 35 ಸಾವಿರದ 864 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದು, ಬಿಸಿಲಿನ ತಾಪದಿಂದ ಗಿಡಗಳ ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಹೊಸ ಕೊಳವೆ ಬಾವಿಗಳ ಕೊರೆಸಲು ರೈತರು ಮುಂದಾಗಿದ್ದು 800 ರಿಂದ1400 ಅಡಿವರೆಗೂ ಕೊರೆದರೂ ನೀರಿನ ಅಂಶ ಕಾಣುತ್ತಿಲ್ಲ ಎಂದು ದಿಗ್ಗೇನಹಳ್ಳಿ ಗ್ರಾಮದ ರೈತ ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ್ ಹೇಳುತ್ತಾರೆ.
ತಾಲೂಕಿನಲ್ಲಿ ಪ್ರತಿ ದಿನವು 28ರಿಂದ 30 ಕೊಳವೆ ಬಾವಿಗಳ ಕೊರೆವ ಲಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಅಡಿಗೆ ₹ 100ಯಿಂದ ₹120 ಆದರೆ, ಸಾವಿರ ಅಡಿಯ ನಂತರ ಕೊರೆಸಿದರೆ ಒಂದು ಅಡಿಗೆ ₹250ರಿಂದ 350ರು.ಗಳ ಕೊಡಬೇಕಿದೆ. ಕೆಲವು ರೈತರು ಈಗಾಗಲೇ ಟ್ಯಾಂಕರ್ ಗಳ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದು, ಒಂದು ಟ್ಯಾಂಕರ್ ನೀರಿಗೆ ₹1,400ರಿಂದ 1,500 ರುಪಾಯಿ ಕೊಟ್ಟು ಅಡಿಕೆ ಗಿಡಗಳಿಗೆ ನೀರುಣಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮುದಿಗೆರೆ ಗ್ರಾಮದ ಅಡಿಕೆ ಬೆಳೆಗಾರ ರೈತ ಸತೀಶ್ ಹೇಳುತ್ತಾರೆ.ಕುಡಿಯುವ ನೀರಿಗೂ ಪರದಾಟ:
ತಾಲೂಕಿನಲ್ಲಿ 241ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಇವುಗಳಲ್ಲಿ ಕೆಲವು ಕಾರ್ಯನಿರ್ವಹಿಸಿದರೆ ಇನ್ನು ಕೆಲವು ಘಟಕಗಳಲ್ಲಿ ಸಮಸ್ಯೆಗಳು ಉಂಟಾಗಿವೆ. ಅವುಗಳ ತಕ್ಷಣ ದುರಸ್ತಿ ಕಾರ್ಯ ಆಗಬೇಕಿದೆ. ಪ್ರಸ್ತುತ ತಾಲೂಕಿನ 20 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳಾಗಿವೆ. ಇನ್ನು 50 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಮುನ್ಸೂಚನೆ ಕಾಣಿಸುತ್ತಿದ್ದು, ಈಗಾಗಲೇ ನೀರಿನ ಕೊರತೆ ಉಂಟಾದ ವಡ್ನಾಳ್, ಕೆರೆಬಿಳಚಿ, ಹೊಸೂರು ಗ್ರಾಮಗಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳು ಬತ್ತಿ ಹೋಗಿದ್ದು ಈ ಮೂರು ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಭಿಯಂತರ ಲೋಹಿತ್ ಹೇಳುತ್ತಾರೆ.ಮುಂದಿನ ಒಂದು ತಿಂಗಳಿನಲ್ಲಿ ಚನ್ನಗಿರಿ ಪಟ್ಟಣ, ಹೊಳಲ್ಕೆರೆ, ಚಿತ್ರದುರ್ಗ, ಸಿರಿಗೆರೆ ತಾಲೂಕು ಸೇರಿ 285 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುತ್ತಿರುವ ಸೂಳೆಕೆರೆಯ ನೀರು ಖಾಲಿಯಾಗಲಿದ್ದು ತಾಲೂಕಿನಲ್ಲಿ ಕುಡಿಯುವ ನೀರಿಗೂ ತತ್ತ್ವರ ಉಂಟಾಗುವ ಭೀತಿ ಇದೆ.
ಕುಡಿವ ನೀರಿನ ಟ್ಯಾಂಕ್ ದುರಸ್ತಿಪಡಿಸಿಚನ್ನಗಿರಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನೆಲಹಾಸಿನ ಟೈಲ್ಸ್‌ಗಳು ಒಡೆದು ಹಾಳಾಗಿವೆ. ಇದರಿಂದ ಗುಂಡಿಯಲ್ಲಿ ನೀರು ನಿಂತು ಬಸ್ ನಿಲ್ದಾಣದ ಪ್ರದೇಶ ಕೆಟ್ಟ ವಾಸನೆಯಿಂದ ಕೂಡಿದೆ. ಇದರ ದುರಸ್ತಿಪಡಿಸಲು ಪುರಸಭೆ ಮುಂದಾಗಬೇಕು ಎಂದು ಅಂಗಡಿಗಳ ವ್ಯಾಪಾರಿಗಳಾದ ಶ್ರೀನಿವಾಸ್, ಸುಮುಖ್, ಶಿವರಾಜ್, ಪ್ರಸನ್ನ, ರಂಗಸ್ವಾಮಿ, ಮಹೇಶ್ವರಪ್ಪ ಒತ್ತಾಯಿಸಿದ್ದಾರೆ. ಕಳೆದ 3-4 ತಿಂಗಳಿನಿಂದ ಪ್ರಯಾಣಿಕರಿಗೆ ಅನಾನುಕೂಲ ಆಗುತ್ತಿದ್ದು ಇದರಲ್ಲಿ ಹುಳಗಳು ಉತ್ಪತ್ತಿಯಾಗಿ ಕೆಟ್ಟ ವಾಸನೆ ಬರುತ್ತಿದೆ. ರೋಗಗಳು ಹರಡುವ ಮೊದಲೇ ದುರಸ್ತಿ ಕಾರ್ಯ ನಡೆಸಲಿ ಎಂದು ಆಗ್ರಹಿಸಿದ್ದಾರೆ.