ಸಾರಾಂಶ
ಕನ್ನಡಪ್ರಭ ವಾರ್ತೆ, ವಿಧಾನಸಭೆ
ಕೇಂದ್ರ ಸರ್ಕಾರದ ಆರ್ಥಿಕ ಅನ್ಯಾಯ ಖಂಡಿಸಿ ರಾಜ್ಯ ಸರ್ಕಾರ ಮಂಡಿಸಿ ಅಂಗೀಕಾರ ಪಡೆದಿದ್ದ ನಿರ್ಣಯದ ವಿರುದ್ಧ ಪ್ರತಿಪಕ್ಷ ಸದಸ್ಯರು ಶುಕ್ರವಾರ ಸಿಡಿದೆದಿದ್ದು, ಕೇಂದ್ರವನ್ನು ದೂಷಿಸುವ ಪ್ರವೃತ್ತಿ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿ ನಿರ್ಣಯ ಮಂಡಿಸಲು ಯತ್ನಿಸಿದರು.ಶುಕ್ರವಾರದ ಕಲಾಪ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿಗೆ ಇಳಿದರು. ಸರ್ಕಾರ ಗುರುವಾರ ಏಕಪಕ್ಷೀಯವಾಗಿ ಕೈಗೊಂಡ ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಈ ವೇಳೆ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು. ಹೀಗಾಗಿ ಕೆಲ ಕಾಲ ಮುಂದೂಡಲ್ಪಟ್ಟ ಕಲಾಪ ಮತ್ತೆ ಸೇರಿದಾಗಲೂ ಬಿಜೆಪಿ ಸದಸ್ಯರು ಗಲಾಟೆ ಮುಂದುವರೆಸಿದ್ದರಿಂದ ಸ್ಪೀಕರ್ ಅವರು ಬಿಲ್ ಮಂಡನೆಗೆ ಅವಕಾಶ ಕೊಟ್ಟರು.ಇದರ ನಡುವೆಯೇ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕೇಂದ್ರದ ಪರ ನಿರ್ಣಯ ಮಂಡಿಸುವುದಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಸ್ತಾಪ ಮಾಡಿದರು. ಪ್ರಸ್ತಾಪವನ್ನು ತಳ್ಳಿ ಹಾಕಿದ ಸ್ಪೀಕರ್ ಯು.ಟಿ. ಖಾದರ್ ಏಕಾಏಕಿ ನಿರ್ಣಯಗಳನ್ನು ಪ್ರಸ್ತಾಪಿಸಲು ಅವಕಾಶವಿಲ್ಲ. ಸದನಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಮೊದಲು ನೋಟಿಸ್ ಕೊಡಿ ಎಂದರು.
ಆರ್. ಅಶೋಕ್, ಸರ್ಕಾರವು ನಿರ್ಣಯ ತರುವ ಕುರಿತು ಕಾರ್ಯಕಲಾಪ ಪಟ್ಟಿಯಲ್ಲಿ ನಮೂದಿಸಿರಲಿಲ್ಲ. ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಸಹ ಪ್ರಸ್ತಾಪಿಸದೇ ರಾಜಕೀಯ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ತರಲಾಗಿದೆ. ನಮಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು.ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಸ್ಪೀಕರ್ ಅನುಮತಿ ಇಲ್ಲದೆಯೇ ನಿರ್ಣಯವನ್ನು ಓದಿದರು. ದೇಶದಲ್ಲಿ ಕಾಂಗ್ರೆಸ್ ಹೆಚ್ಚು ವರ್ಷ ಆಡಳಿತ ನಡೆಸಿದೆ. ಹಲವು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ ಶೇ.20ರಷ್ಟು ಕೊಟ್ಟಿದ್ದು ಶೇ.30ಕ್ಕೆ ಹೆಚ್ಚಿಸಲು ಸುದೀರ್ಘ ಹೋರಾಟ ಮಾಡಬೇಕಾಯಿತು. ಶೇ.30ರಿಂದ ಶೇ.40ಕ್ಕೆ ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು. ಮೋದಿ ಸರ್ಕಾರವು ಶೇ.32ರಿಂದ ಶೇ.42ಕ್ಕೆ ಏರಿಸಿತ್ತು. ಹೀಗಾಗಿ ರಾಜ್ಯದ ಆರೋಪ ಸುಳ್ಳು. ಕೇಂದ್ರದಲ್ಲಿ ಸೆಸ್ ಮತ್ತು ಸರ್ ಚಾರ್ಜ್‌ಗಳು ಕಾಂಗ್ರೆಸ್ ಸರ್ಕಾರದ ಕಾಲದಿಂದಲೂ ಇವೆ. ನಮ್ಮ ರಾಜ್ಯಕ್ಕೆ 1,06,258 ಕೋಟಿ ರು. ಜಿಎಸ್‌ಟಿ ಪರಿಹಾರ ಬಂದಿದೆ. ಈ ಸತ್ಯವನ್ನು ಮರೆಮಾಚಿ ರಾಜ್ಯಕ್ಕೆ ಇನ್ನಷ್ಟು ಪಾಲು ಬರಬೇಕು ಎಂಬ ಬೇಡಿಕೆ ರಾಜಕೀಯ ಪ್ರೇರಿತ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ತಂದಿರುವ ನಿರ್ಣಯವನ್ನು ಖಂಡಿಸುತ್ತೇವೆ. ರಾಜ್ಯದ ವೈಫಲ್ಯ ಮರೆಮಾಚಲು ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈಬಿಡುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದರು.