ಸಾರಾಂಶ
ರೈತ ಹೋರಾಟಗಾರರು ಜಾರಿಗೊಳಿಸಲು ಆಗ್ರಹಿಸುತ್ತಿರುವ, ಸ್ವಾಮಿನಾಥನ್ ಆಯೋಗದ ವರದಿಯ ಎಲ್ಲ 207 ಶಿಫರಾಸುಗಳನ್ನೂ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಆದರೂ ಅಂತಾರಾಷ್ಟ್ರೀಯ ಪಿತೂರಿಯಂತೆ ಕೆಲವು ಸಂಘಟನೆಗಳು ಸೇರಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿವೆ ಎಂದು ಕರಂದ್ಲಾಜೆ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಕೇವಲ ರಾಜಕೀಯ ಪ್ರೇರಿತ ಹೋರಾಟ ಎಂದು ಕೇಂದ್ರ ರೈತ ಮತ್ತು ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಹೋರಾಟಗಾರರು ಜಾರಿಗೊಳಿಸಲು ಆಗ್ರಹಿಸುತ್ತಿರುವ, ಸ್ವಾಮಿನಾಥನ್ ಆಯೋಗದ ವರದಿಯ ಎಲ್ಲ 207 ಶಿಫರಾಸುಗಳನ್ನೂ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಆದರೂ ಅಂತಾರಾಷ್ಟ್ರೀಯ ಪಿತೂರಿಯಂತೆ ಕೆಲವು ಸಂಘಟನೆಗಳು ಸೇರಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿವೆ ಎಂದರು.ಸ್ವಾಮಿನಾಥನ್ ಆಯೋಗವು 2006ರಲ್ಲಿಯೇ ತನ್ನ ವರದಿ ನೀಡಿತ್ತು, ಆಗ ಇದ್ದ ಯುಪಿಎ ಸರ್ಕಾರ 2014ರ ವರೆಗೆ ಈ ವರದಿಯನ್ನು ಕೋಲ್ಟ್ ಸ್ಟೋರೆಜ್‌ಗೆ ಹಾಕಿಟ್ಟಿತ್ತು ಎಂದವರು ಆರೋಪಿಸಿದರು.2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗ ಕೂಡಲೇ ಸ್ವಾಮಿನಾಥನ್ ಅವರನ್ನು ಕಂಡು ಚರ್ಚೆ ನಡೆಸಿದರು ಮತ್ತು ಅವರ ವರದಿಯ ಎಲ್ಲ 207 ಶಿಫಾರಸುಗಳನ್ನು ಕ್ಯಾಬಿನೆಟ್ ಮುಂದೆ ತಂದು ಜಾರಿಗೊಳಿಸಿದ್ದಾರೆ. ಆಯೋಗವು ಬೆಳೆಗಳ ಗರಿಷ್ಟ ಬೆಂಬಲ ಬೆಲೆಯನ್ನು ಉತ್ಪಾದಕ ವೆಚ್ಚದ 1.50 ಪಟ್ಟು ನೀಡಬೇಕು ಎಂದೂ ಶಿಫಾರಸು ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಅದಕ್ಕಿಂತಲೂ ಹೆಚ್ಚು, ಅದೂ 22 ಬೆಳೆಗಳಿಗೆ ನೀಡುತ್ತಿದೆ. ಆದರೆ ಮತ್ತದೇ ಶಿಫಾರಸು ಜಾರಿಗೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ ಎಂದರು.ಈಗಾಗಲೇ ರೈತರ ಜೊತೆಗೆ ಕೇಂದ್ರ ಸರ್ಕಾರ 3 ಬಾರಿ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಲಾಗಿದೆ, ಇನ್ನೂ ಚರ್ಚೆಗೆ ಸಿದ್ಧವಿದೆ ಎಂಬ ಸಂದೇಶವನ್ನು ನೀಡಲಾಗಿದೆ ಎಂದು ಶೋಭಾ ಹೇಳಿದರು.------
ಮತ್ತೊಮ್ಮೆ ಮೋದಿ ಗೋಡೆಬರಹಕ್ಕೆ ಶೋಭಾ ಚಾಲನೆಉಡುಪಿ ವಿಧಾನ ಸಭಾ ಕ್ಷೇತ್ರದ ಅಂಬಲಪಾಡಿ ವಾರ್ಡಿನಲ್ಲಿ 2024ಕ್ಕೆ ಮತ್ತೊಮ್ಮೆ ಮೋದಿ ಗೋಡೆ ಬರಹ ಅಭಿಯಾನಕ್ಕೆ ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ತೀರ್ಥಹಳ್ಳಿ ಶಾಸಕ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಭಾರಿ ಆರಗ ಜ್ಞಾನೇಂದ್ರ, ಪಕ್ಷದ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಕಿರಣ್ ಕುಮಾರ್ ಬೈಲೂರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.