ಕೃಷಿಕರು, ಬಡ, ಮಧ್ಯಮ ವರ್ಗದ ಬಗ್ಗೆ ಬಜೆಟ್‌ನಲ್ಲಿ ಅತಿಹೆಚ್ಚು ಕಾಳಜಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

| Published : Feb 02 2025, 01:02 AM IST

ಕೃಷಿಕರು, ಬಡ, ಮಧ್ಯಮ ವರ್ಗದ ಬಗ್ಗೆ ಬಜೆಟ್‌ನಲ್ಲಿ ಅತಿಹೆಚ್ಚು ಕಾಳಜಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿಯಾಗಿದೆ. ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ರೈತನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳನ್ನು ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿಕರ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿ, ಬಡ, ಮಧ್ಯಮ ವರ್ಗದ ಜನರ ಬದುಕನ್ನು ಹಸನು ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆಯವ್ಯಯ 2047ರ ವಿಸಿತ ಭಾರತದ ಕನಸು ಸಾಕಾರಕ್ಕೆ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿಯಾಗಿದೆ. ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ರೈತನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳನ್ನು ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರೈತರು ಸಶಕ್ತಗೊಂಡು ಉತ್ತಮ ಆದಾಯ ಗಳಿಸುವ, ಗ್ರಾಮೀಣ ಆರ್ಥಿಕತೆ ಬಲಪಡಿಸುವ ಮತ್ತು ಭವಿಷ್ಯದ ಸವಾಲುಗಳಿಗೆ ಭಾರತೀಯ ಕೃಷಿಯನ್ನು ಸಜ್ಜುಗೊಳಿಸುವ, ಪಿಎಂ ಧನಧಾನ್ಯ ಯೋಜನೆ ಕ್ರಾಂತಿಕಾರಕ ಹೆಜ್ಜೆಯಾಗಿದೆ. ದೇಶಿ ಕೃಷಿಗೆ ವಿಶ್ವದರ್ಜೆಯ ಮೂಲ ಸೌಕರ್ಯ, ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅತ್ಯುತ್ತಮ ವ್ಯವಸ್ಥೆ, ರಫ್ತಿಗೆ ಉತ್ತೇಜನ, ರೈತರಿಗೆ ಹೆಚ್ಚು ಆದಾಯ ಮತ್ತು ಗ್ರಾಮ ಭಾರತಕ್ಕೆ ಬಜೆಟ್ ಬಲ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ತಂತ್ರಜ್ಞಾನ ಹಾಗೂ ಕೃಷಿ ಆಧಾರಿತ ಸ್ಟಾರ್ ಟಪ್‌ಗಳ ಉತ್ತೇಜನಕ್ಕೆ 1 ಲಕ್ಷ ಕೋಟಿ ರು.ಮೀಸಲು ಇಟ್ಟಿರುವುದು ಸ್ವಾಗತಾರ್ಹ. ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅತ್ಯಾಧುನಿಕ ನೀರಾವರಿ ಸೌಲಭ್ಯಕ್ಕೆ ಬಜೆಟ್ ನಲ್ಲಿ ಆದ್ಯತೆ ಕೊಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೂಲ ಸೌಕರ್ಯ ಉತ್ತಮ ಪಡಿಸುವುದು, ಪಿಎಂ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ಹೆಚ್ಚಿನ ರೈತರು ಒಳಗೊಳ್ಳಲಿದ್ದು, ಫಸಲು ನಷ್ಟ ಉಂಟಾದ ವೇಳೆ ಶೀಘ್ರ ವಿಮಾ ಸೌಲಭ್ಯ ಸಿಗುವಂತೆ ಮಾಡುವುದು ಹಾಗೂ ಅನ್ನದಾತನ ಸುರಕ್ಷತೆಗೆ ಅತಿಹೆಚ್ಚು ಒತ್ತು ಕೊಟ್ಟು, ರೈತರಿಗೆ ಎಲ್ಲಾ ರೀತಿಯ ಉತ್ತೇಜನ ನೀಡುವ ಬಗ್ಗೆ ಬಜೆಟ್‌ನಲ್ಲಿ ಭರವಸೆ ಕೊಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರು. ಮೀಸಲು ಇರಿಸಿರುವುದು ರಾಜ್ಯಗಳ ಆರ್ಥಿಕ ಶಕ್ತಿಗೆ ಬಲ ತುಂಬಲು ಕೈಗೊಂಡ ಮಹತ್ವದ ಕ್ರಮವಾಗಿದೆ. ಆದಾಯ ತೆರಿಗೆ ವಿನಾಯ್ತಿ ಮಿತಿ 12 ಲಕ್ಷಕ್ಕೆ ಏರಿಸಲಾಗಿದೆ. ವಿವಿಧ ಕಾಯಿಲೆಗಳ 36 ಜೀವರಕ್ಷಕ ಔಷಧಿಗಳಿಗೆ ವಿನಾಯ್ತಿ ಕೊಡಲಾಗಿದೆ. ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ಮೂಲಕ ಆಟಿಕೆಗಳ ವಲಯಕ್ಕಾಗಿ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.