ಚಿಕ್ಕಮಗಳೂರು, ಗ್ರಾಮೀಣ ಭಾಗದ ರೈತರು, ಬಡವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಗ್ರಾಮ ಪಂಚಾಯಿತಿಗೆ ಬಂದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಸ್ಪಂದಿಸಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಸೂಚಿಸಿದರು.

ಕಳಸಾಪುರದಲ್ಲಿ ನರೇಗಾ ಯೋಜನೆಯಡಿ ನೂತನ ಗ್ರಾಮ ಪಂಚಾಯ್ತಿ ಕಟ್ಟಡ, ಗ್ರಂಥಾಲಯ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗ್ರಾಮೀಣ ಭಾಗದ ರೈತರು, ಬಡವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಗ್ರಾಮ ಪಂಚಾಯಿತಿಗೆ ಬಂದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಸ್ಪಂದಿಸಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಸೂಚಿಸಿದರು.ಬುಧವಾರ ಕಳಸಾಪುರದಲ್ಲಿ ನರೇಗಾ ಯೋಜನೆಯಡಿ ₹24.30 ಲಕ್ಷ ವೆಚ್ಚದಲ್ಲಿ ನೂತನ ಗ್ರಾಮ ಪಂಚಾಯ್ತಿ ಕಟ್ಟಡ ಹಾಗೂ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿಬಿ ಜಿ ರಾಮ್ ಜಿ ಯೋಜನೆಯಿಂದ ಒಂದು ಕಾಂಪೌಂಡ್ ನಿರ್ಮಾಣ ಮಾಡಲು ಅಸಾಧ್ಯ. ನರೇಗಾ ಯೋಜನೆಯಡಿ ಸುಂದರವಾಗಿ ನಿರ್ಮಿಸಿರುವ ಕಟ್ಟಡ ನರೇಗಾ ಯೋಜನೆಯಿಂದ ಮಾತ್ರ ಸಾಧ್ಯ ಎಂದು ಈ ಗುಣಮಟ್ಟದ ಕಟ್ಟಡ ಸಾಕ್ಷಿ ಎಂದರು.ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಂತಾದವುಗಳಿಗೆ ಸಾರ್ವಜನಿಕರು ಖಾತೆ ಬದಲಾವಣೆ, ಜನನ ಮರಣ ಪ್ರಮಾಣ ಪತ್ರ, ಇ ಖಾತಾ ಸಮಸ್ಯೆಗಳಿಗೆ ಮೊದಲು ಭೇಟಿ ನೀಡುತ್ತಾರೆ. ನಂತರ ಶಾಸಕರು, ಸಚಿವರು, ಸಂಸದರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿ ಕೊಳ್ಳುತ್ತಾರೆಂದು ಹೇಳಿದರು.ಬೀದಿ ದೀಪ, ಚರಂಡಿ ಸ್ವಚ್ಚತೆ, ಕುಡಿಯುವ ನೀರು ಈ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿ ನೀಡಲು ಪಂಚಾಯಿತಿಗೆ ಸಾರ್ವಜನಿಕರು ಬಂದಾಗ ಸ್ಪಂದಿಸಿ ಕೆಲಸ ಮಾಡಿಕೊಡಬೇಕೆಂದು ಸಲಹೆ ನೀಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾ ಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮರ್ಪಕ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.ನರೇಗಾ ಯೋಜನೆ ಶಕ್ತಿಯನ್ನು ಕುಗ್ಗಿಸಲಾಗಿದೆ. ಮೊದಲು ಶೇ.90 - 10 ಇದ್ದದ್ದನ್ನು ಹೊಸ ನಾಮಕರಣದ ಯೋಜನೆ ಜಾರಿಯಾದರೆ ಶೇ.60-40 ಆಗುತ್ತದೆ. ಇದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಹೋರಾಟ ರೂಪಿಸಿ ವಾಪಾಸ್ ಪಡೆಯುವಂತೆ ಒತ್ತಾಯಿಸಲಾಗುವುದೆಂದರು.ಹಿಂದೆ ತೋಟಗಾರಿಕೆ ಬೆಳೆ ಬೆಳೆಯಲು ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಸಬ್ಸಿಡಿ ನೀಡುತ್ತಿದ್ದು, ಈಗ ಪ್ರೋತ್ಸಾಹಧನ ರದ್ದು ಮಾಡಿದ್ದಾರೆ. ಗ್ರಾಪಂನಲ್ಲಿ ಕ್ರಿಯಾ ಯೋಜನೆ ತಯಾರಿಸಲು ಅವಕಾಶವಿತ್ತು. ಇನ್ನು ಮುಂದೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮ ಜಾರಿಗೆ ಬರುತ್ತಿದೆ ಎಂದು ಎಚ್ಚರಿಸಿದರು.ಸ್ಥಳೀಯ ಸಂಸ್ಥೆ ಸದಸ್ಯರು, ರೈತರು, ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳಿಗೆ ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಯೋಜನೆ ಮಾರಕವಾಗಿದೆ. ಈ ಬಗ್ಗೆ ನಾಳೆಯಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಳಸಾಪುರ ಗ್ರಾಪಂ ಅಧ್ಯಕ್ಷ ಶಿವರತ್ನ, ಉಪಾಧ್ಯಕ್ಷೆ ಶ್ವೇತ, ಸದಸ್ಯರಾದ ಮಂಜುಳ, ಕೆ.ಎಸ್. ಶ್ರೀಧರ್, ಕೆ.ಸಿ ಚಂದ್ರಶೇಖರ್, ನಾಗೇಗೌಡ, ಡಿ.ಸಿ. ಯೋಗೀಶ್, ರಾಧ, ರುಕ್ಮಿಣಿ, ಗೌಸ್‌ ಖಾನ್, ವೆಂಕಟೇಶ್, ಕೆ.ಸಿ. ದೇವರಾಜ್, ಗೌರಮ್ಮ, ಲಕ್ಷ್ಮಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ಸತೀಶ್ ಉಪಸ್ಥಿತರಿದ್ದರು, 21 ಕೆಸಿಕೆಎಂ 4ಕಳಸಾಪುರ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಶಾಸಕ ಎಚ್‌.ಡಿ.ತಮ್ಮಯ್ಯ ಬುಧವಾರ ಉದ್ಘಾಟಿಸಿದರು.