ಬಿಡದಿ ಟೌನ್‌ಶಿಪ್ ವಿರೋಧಿಸಿ 2ನೇ ದಿನವೂ ಮುಂದುವರೆದ ರೈತರ ಧರಣಿ

| Published : Sep 14 2025, 01:04 AM IST

ಬಿಡದಿ ಟೌನ್‌ಶಿಪ್ ವಿರೋಧಿಸಿ 2ನೇ ದಿನವೂ ಮುಂದುವರೆದ ರೈತರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ಭೂ ಸ್ವಾಧೀನ ಪ್ರಕ್ರಿಯೆಗೆ ನೋಟಿಸ್ ನೀಡಿರುವುದು ಹಾಗೂ ಜೆಎಂಸಿ ಸರ್ವೆ ಕಾರ್ಯಾಚರಣೆ ಮಾಡುತ್ತಿರುವುದು ಅನ್ಯಾಯ.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳ ರೈತರು ಆರಂಭಿಸಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಎರಡನೇ ದಿನವಾದ ಶನಿವಾರವೂ ಮುಂದುವರೆಯಿತು.

ಚಿಕ್ಕಬೈರಮಂಗಲ, ಕೊಡಳ್ಳಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಧರಣಿ ನಡೆಸುತ್ತಿರುವ ನೂರಾರು ರೈತರು, ಪ್ರಾಣ ಕೊಟ್ಟರೂ ಭೂಮಿ ಕೊಡಲ್ಲ, ಜೆಎಂಸಿ ಕಾರ್ಯಾಚರಣೆ ನಿಲ್ಲಿಸಿ ಅಧಿಕಾರಿಗಳೇ ಗ್ರಾಮದಿಂದ ಹೊರ ನಡೆಯಿರಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ಭೂ ಸ್ವಾಧೀನ ಪ್ರಕ್ರಿಯೆಗೆ ನೋಟಿಸ್ ನೀಡಿರುವುದು ಹಾಗೂ ಜೆಎಂಸಿ ಸರ್ವೆ ಕಾರ್ಯಾಚರಣೆ ಮಾಡುತ್ತಿರುವುದು ಅನ್ಯಾಯ. ಶಾಸಕರು, ಸಚಿವರು ಅಥವಾ ಜಿಲ್ಲಾಧಿಕಾರಿ, ಜಿಬಿಡಿಎ ಆಯುಕ್ತರಾದಿಯಾಗಿ ಸರ್ಕಾರದಿಂದ ಅಧಿಕೃತ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಜೊತೆ ಚರ್ಚೆ ನಡೆಸಬೇಕು. ಅಲ್ಲಿವರೆಗೆ ಜೆಎಂಸಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಎಂದು ಒತ್ತಾಯಿಸಿದರು.

ಬೈರಮಂಗಲ ಮತ್ತು ಕುಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ವಿರೋಧಿ ಈಗಾಗಲೇ ರೈತರು ಹಲವು ಬಾರಿ ಸಭೆ ನಡೆಸಿದ್ದೇವೆ. ಆದರೆ, ಸರ್ಕಾರ ತನ್ನ ನಿಲುವಿಗೂ ಮುನ್ನ ರೈತರೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೆ ಏಕ ಪಕ್ಷಿಯ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.

ಭೂ ಸ್ವಾಧೀನ ಪ್ರಕ್ರಿಯೆಗೆ ಶೇ. 80ರಷ್ಟು ರೈತರು ಹಾಗೂ ಭೂ ಮಾಲೀಕರು ಒಪ್ಪಿಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸುಳ್ಳು ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಶಾಸಕ ಬಾಲಕೃಷ್ಣ ಅವರಿಗೆ ತಾಕತ್ತಿದ್ದರೆ ರೈತರ ಬಳಿಗೆ ಬಂದು ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು.

ಸರ್ಕಾರಿ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡು ತಮಗೆ ಬೇಕಾದಂತೆ ಕೆಲಸ ಮಾಡಿಸುತ್ತಿದ್ದಾರೆ. ಅಧಿಕಾರಿಗಳನ್ನು ಬಿಟ್ಟು ಜೆಎಂಸಿ ಸರ್ವೆ ಮಾಡಿಸಲು ಮುಂದಾಗಿದ್ದಾರೆ. ನಮ್ಮ ಜಮೀನುಗಳನ್ನು ಜೆಎಂಸಿ ಸರ್ವೆ ಮಾಡಲು ಅವಕಾಶ ನೀಡುವುದಿಲ್ಲ. ಪ್ರಾಣ ಬಿಟ್ಟರೂ ನಮ್ಮ ಕೃಷಿ ಭೂಮಿ ಕೊಡುವುದಿಲ್ಲ. ನ್ಯಾಯ ಸಿಗುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮಹಿಳೆ ಜಯಮ್ಮ, ನಾವೇನು ಕಾಂಗ್ರೆಸ್ ಗೆ ವೋಟು ಹಾಕುತ್ತೇವೆ ಎಂದು ಬಂದಿರಲಿಲ್ಲ. ನೀವುಗಳೇ ಮಹಿಳೆಯರಿಗೆ ಗ್ಯಾರಂಟಿ ಆಸೆ ತೋರಿಸಿ ವೋಟು ಹಾಕಿಸಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ. ಭೂಮಿ ಕಸಿದುಕೊಂಡು ಕೂಲಿ ಮತ್ತು ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕೈಯಲ್ಲಿ ಪುಕ್ಸಟೆ ಯೋಜನೆಗಳನ್ನು ಕೊಟ್ಟು, ಮತ್ತೊಂದು ಕೈಯಿಂದ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ನಿಮ್ಮ ಪುಕ್ಸಟೆ ಯೋಜನೆಗಳು ನಮಗೆ ಬೇಕಾಗಿಲ್ಲ. ಈಗಿನಿಂದಲೇ ಅವೆಲ್ಲವನ್ನು ಸ್ಥಗಿತಗೊಳಿಸಿ. ನಿಮಗೆ ಮಾನ ಮರ್ಯಾದೆ ಎನ್ನುವುದಿದ್ದರೆ ರೈತರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸುವ ಕೆಲಸ ಮಾಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಪ್ರತಿಭಟನೆಯಲ್ಲಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಕಾರ್ಯದರ್ಶಿ ಸೀನಪ್ಪ ರೆಡ್ಡಿ, ಖಜಾಂಚಿ ನಾಗರಾಜು, ರೈತ ಮುಖಂಡರಾದ ರಾಧಾಕೃಷ್ಣ, ಅಶ್ವತ್ಥ್ , ಕೃಷ್ಣ, ರಾಜಣ್ಣ, ಶಿವರಾಮು, ಚಂದ್ರು, ಕೇಶವರೆಡ್ಡಿ, ಕೃಷ್ಣಪ್ಪ , ಅರಳಾಳುಸಂದ್ರ ಗ್ರಾಮದ ಸುಮಾ ಮತ್ತಿತರರು ಭಾಗವಹಿಸಿದ್ದರು.

-----

13ಕೆಆರ್ ಎಂಎನ್ 3.ಜೆಪಿಜಿ

ಬೈರಮಂಗಲ ವೃತ್ತದಲ್ಲಿ ರೈತರು 2ನೇ ದಿನವಾದ ಶನಿವಾರವೂ ಪ್ರತಿಭಟನಾ ಧರಣಿ ಮುಂದುವರೆಸಿದರು.