ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸುವ ಸರ್ಕಾರದ ಕ್ರಮ ಖಂಡಿಸಿ ನಗರದಲ್ಲಿ ರಾಜ್ಯ ರೈತ ಸಂಘದಿಂದ ನಗರದ ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಚೆಸ್ಕಾಂ ಕಚೇರಿವರಗೆ ಇಂಧನ ಮಂತ್ರಿ ಕೆ.ಜೆ.ಜಾರ್ಜ್ ಅವರ ಅಣುಕು ಶವಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರು, ಆದರೆ ಪೊಲೀಸರು ಅಣುಕು ಶವಯಾತ್ರೆಗೆ ಅವಕಾಶ ನೀಡಲಿಲ್ಲ, ಅನಂತರ ಪ್ರತಿಕೃತಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು, ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ ಹಾಗೂ ಇಂಧನ ಮಂತ್ರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಚೆಸ್ಕಾಂ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ ಕಾರ್ಯಪಾಲಕ ಅಭಿಯಂತರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ.ಗುರುಪ್ರಸಾದ್, ಇದು ಸಾಂಕೇತಿಕ ಪ್ರತಿಭಟನೆ, ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸುವ ಮೂಲಕ ರೈತರನ್ನು ಶೋಷಿಸುತ್ತಿದೆ ಎಂದರು. ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸಲು ₹10,000 ಡಿಪೋಜಿಟ್ ಶುಲ್ಕ ನಿಗದಿಪಡಿಸಿರುವುದನ್ನು ಹಿಂಪಡೆಯಬೇಕು, ರೈತರಿಗೆ ವಿದ್ಯುತ್ ಪರಿಕರಣಗಳನ್ನು ಅಕ್ರಮ-ಸಕ್ರಮ ಅಡಿಯಲ್ಲಿ ಈ ಹಿಂದೆ ನೀಡಿದ್ದಂತೆಯೇ ಉಚಿತವಾಗಿ ನೀಡಬೇಕು, ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಸರ್ಕಾರದ ಶೀಘ್ರ ಯೋಜನೆ ಅಡಿಯಲ್ಲಿ ಟಿ.ಸಿ.ಗಳನ್ನು ಮಾತ್ರ ನೀಡಲಿದ್ದು, ಉಳಿದ ಕಂಬ ಮತ್ತು ವೈರ್‌ಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವೇ ಇಲ್ಲ. ಸರ್ಕಾರವೇ ಉಚಿತವಾಗಿ ನೀಡಬೇಕು ಎಂದರು. ಜಮೀನಿನಲ್ಲಿ ವಾಸಿಸುತ್ತಿರುವ ರೈತರಿಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕೆಲವು ಭಾಗದ ರೈತರಿಗೆ ವಿದ್ಯುತ್ ನೀಡುತ್ತಿದ್ದು, ಇನ್ನು ಕೆಲವು ಭಾಗದ ರೈತರ ವಿದ್ಯುತ್‌ಯನ್ನು ನೀಡುತ್ತಿಲ್ಲ. ಆದ್ದರಿಂದ ಎಲ್ಲ ಭಾಗದ ರೈತರಿಗೂ ಸಮರ್ಪಕ ವಿದ್ಯುತ್ ನೀಡಬೇಕು. ಬೆಸ್ಕಾಂನವರು 11 ಕೆ.ವಿ ಮತ್ತು ಎಲ್.ಟಿ. ಲೈನ್‌ಗಳಲ್ಲಿ ಬೆಳೆದಿರುವ ಗಿಡ ಮರಗಳು ಸುಮಾರು 15 ವರ್ಷಗಳಿಂದ ಬೆಳೆದಿದ್ದು, ವಿದ್ಯುತ್ ತಾಗಿ ಲೈನ್ ವೈರ್ ಸುಟ್ಟುಹೋಗುತ್ತವೆ, ಕೃಷಿ ಪಂಪ್‌ಸೆಟ್, ಟಿ.ಸಿ.ಮೋಟಾರ್, ಕೇಬಲ್‌ಗಳು ಸುಟ್ಟು ರೈತರಿಗೆ ಲಕ್ಷಾಂತರ ರು.ಬೆಳೆನಷ್ಟವಾಗುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮಾಡಿರುವ ಯತ್ನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಡ್ರಹಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್, ಚಿಕ್ಕಣ್ಣ, ನಾಗರಾಜು, ಪ್ರಕಾಶ್, ಕಂದೇಗಾಲ ಋಷಿ, ಮಹೇಶ್, ಲಿಂಗಸ್ವಾಮಿ, ಗೋವಿಂದು, ಶಿವಪಾದ, ಮಹದೇವಸ್ವಾಮಿ, ಬೆಳ್ಳಶೆಟ್ಟಿ ಇತರರು ಇದ್ದರು.