ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಬೆಳ್ಳುಳ್ಳಿ ಖರೀದಿದಾರರಿಂದ ರೈತರಿಗೆ ಮೋಸವಾಗುತ್ತಿದೆ ಎಂದು ಆರೋಪಿಸಿ ಗುರುವಾರ ತಾಲೂಕಿನ ಹಲಗೇರಿ ಗ್ರಾಮದ ಎಪಿಎಂಸಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಇಂತಹ ಬರಗಾಲದಲ್ಲಿ ಬೆಳ್ಳುಳ್ಳಿ ದರ ಏರಿಕೆಯಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಾಹಾಸ ಮೂಡಿಸಿದೆ. ಆದರೆ ಖರೀದಿದಾರರ ವಂಚನೆಯಿಂದ ರೈತರಿಗೆ ಅನ್ಯಾಯ ಉಂಟಾಗುತ್ತಿದೆ. ರೈತರನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಶೋಷಣೆ ಮಾಡಲಾಗುತ್ತಿದೆ. ಬೆಳ್ಳುಳ್ಳಿ ಖರೀದಿದಾರರು ಅತಿಯಾದ ಆಸೆಗೆ ಬಿದ್ದು ಕಳೆದ 45 ದಿನಗಳಿಂದ ಇಲ್ಲಿಗೆ ಬೆಳ್ಳುಳ್ಳಿ ಮಾರಾಟಕ್ಕೆ ಬರುವ ರೈತರಿಂದ ಮಾರುಕಟ್ಟೆಯಲ್ಲಿ ಇರುವ ದರಕ್ಕಿಂತ ಕಡಿಮೆ ದರಕ್ಕೆ ಖರೀದಿಸಲಾಗತ್ತಿದೆ. ಖಾಸಗಿ ಸಾಮೀಲ್‌ನಲ್ಲಿಯೇ ಅನಧಿಕೃತ ಮಾರುಕಟ್ಟೆ ನಿರ್ಮಿಸಿಕೊಂಡು ಇಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರೈತರಿಗೆ ಮೋಸ ಮಾಡುತ್ತಿರುವ ಮಾಡಿಕೊಂಡ ಖರೀದಿದಾರರ ಲೈಸನ್ಸ್‌ನ್ನು ರದ್ದುಪಡಿಸಬೇಕು. ಈಗಿರುವ ಬೆಳ್ಳುಳ್ಳಿ ದರ ಪ್ರತಿ ವರ್ಷ ದೊರೆಯುವುದಿಲ್ಲ. ಇದು 4-5 ವರ್ಷಳಿಗೊಮ್ಮೆ ಬರುತ್ತದೆ. ಮಾರುಕಟ್ಟೆಯಲ್ಲಿ ಸದ್ಯ ₹30 ಸಾವಿರ ದರವಿದ್ದರೆ ಅದನ್ನು ಬೇರೆ ಬೇರೆ ಜಿಲ್ಲೆಗಳಿಂದ ಬರುವ ರೈತರಿಂದ ಕಡಿಮೆ ಬೆಲೆಗೆ ಖರೀದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ರೈತ ಮುಖಂಡ ಬಸಣ್ಣ ಕಡೂರ ಮಾತನಾಡಿ, ಅಧಿಕಾರಿಗಳ ಒಳಸಂಚಿನಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಹಲಗೇರಿ ಎಪಿಎಂಸಿ ದೊಡ್ಡ ಪ್ರಾಂಗಣವಾಗಿದ್ದು, ಇಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಸಿಪಿಐ ಸಿದ್ದೇಶ, ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ., ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಎನ್. ಮಂಜುನಾಥ, ಎಂ.ಎನ್. ಬೆಣ್ಣಿ ಹಾಗೂ ತಂಡ ಮಾರುಕಟ್ಟೆಯಲ್ಲಿ ರೈತರಿಗೆ ಯಾವುದೇ ಮೋಸವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ರೈತ ಮುಖಂಡ ಪ್ರಕಾಶ ಹರಿಯಾಳದವರ, ದಿಳ್ಳೆಪ್ಪ ಅಂತರವಳ್ಳಿ, ಲಕ್ಷ್ಮಣರೆಡ್ಡಿ ವಡೇರಹಳ್ಳಿ, ನಿಂಗಪ್ಪ ಬನ್ನಿಕೊಡ, ಸೋಮಪ್ಪ ಕೋಣನತೆಲಿ, ಅಶೋಕ ಶಿವಲಿಂಗಪ್ಪನವರ, ರಾಜಪ್ಪ ತಳವಾರ ಸೇರಿದಂತೆ ಇತರರಿದ್ದರು.