ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ, ಶೇಂಗಾ, ಮೆಕ್ಕೆ ಜೋಳ, ಸಜ್ಜಿ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳುನಿರಂತರ ಮಳೆಯಿಂದ ಸಂಪೂರ್ಣ ಹಾನಿಯಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡದೇ ಉದ್ದೇಶ ಪೂರ್ವಕವಾಗಿ ವಿಳಂಬ ನೀತಿ ಅನುಸಿರುತ್ತಿದ್ದು, ಇದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ವಿಜಯಪುರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಸಲ್ಲಿಸಿದರು.ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತೊಗರಿ ಬೆಳೆ ಹಾನಿಯಾದ
ರೈತರಿಗೆ ಗುಲ್ಬರ್ಗಾ ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಕಂತುವಾಗಿ ₹263 ಕೋಟಿ ಹಣ ಬಿಡುಗಡೆಯಾಗಿ ರೈತರ ಖಾತೆಗೂ ಜಮಾ ಮಾಡಲಾಗಿದೆ. ಆದರೆ ವಿಜಯಪುರ ಜಿಲ್ಲೆಯ ರೈತರಿಗೆ ಇನ್ನು ಬಿಡಿಗಾಸು ಹಣ ಬಂದಿಲ್ಲ. ಮುಖ್ಯಮಂತ್ರಿಗಳು ಏಕ ಕಾಲಕ್ಕೆ ವೈಮಾನಿಕ ಸಮೀಕ್ಷೆ ನಡೆಸಿ ಗುಲ್ಬರ್ಗಾ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ಹಾನಿಗೊಳಗಾದ ತೊಗರಿ ಬೆಳೆ ಸೇರಿದಂತೆ ಎಲ್ಲ ಬೆಳೆಗಳ ಸ್ಥಿತಿಗತಿ ಕುರಿತು ಸಂಪೂರ್ಣ ಮನವರಿಕೆ ಮಾಡಿಕೊಂಡಿದ್ದಾರೆ. ಎಲ್ಲ ಬೆಳೆ ಹಾಳಾಗಿದ್ದು ಗಮನಕ್ಕೆ ಬಂದಿದ್ದರೂ ಕೂಡ ನಮ್ಮ ಜಿಲ್ಲೆ ರೈತರಿಗೆ ಪರಿಹಾರ ನೀಡದೆ ಮೊದಲ ಆದ್ಯತೆ ಗುಲ್ಬರ್ಗಾ ಜಿಲ್ಲೆಯ ರೈತರಿಗೆ ನೀಡಿದ್ದಾರೆ. ಮೊದಲಿನಿಂದಲೂ ಎಲ್ಲ ವಿಷಯದಲ್ಲಿಯೂ ಕೂಡ ನಮ್ಮ ಜಿಲ್ಲೆಯ ರೈತರಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಹಾಯ್ದು ಹೋಗಿರುವ ಡೋಣಿ ನದಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಮಾಡಿ ಅಲ್ಲಿ ವಾಸಿಸಲು ಜನರಿಗೆ ಮನೆ ಕಟ್ಟುವ ತರಾತುರಿಯಲ್ಲಿ ಜಿಲ್ಲಾಡಳಿತವಿದೆ. ಇದನ್ನು ನಾವು ಸಂಪೂರ್ಣ ವಿರೋಧಿಸುತ್ತೇವೆ. ಒಂದು ವೇಳೆ ಅಲ್ಲಿಯೇ ಮನೆ ನಿರ್ಮಾಣ ಮಾಡಿದರೆ ಮೇಲ್ಭಾಗದಲ್ಲಿ ಮಳೆಯಾದರೆ ಪ್ರವಾಹ ಬಂದು ಮನೆಗಳಲ್ಲಿ ನೀರು ನುಗ್ಗಿ ಕುಟುಂಬಗಳಿಗೆ ತೀವ್ರ ತೊಂದರೆಯಾಗುತ್ತದೆ. ಭೂ ಪರಿವರ್ತನೆ ಮಾಡಿದ್ದೇ ಕಾನೂನು ಬಾಹಿರವಾಗಿದೆ. ಆದ್ದರಿಂದ ಕೂಡಲೇ ಭೂ ಪರಿವರ್ತನೆ ಮಾಡಿದ್ದನ್ನು ರದ್ದುಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹುಣಶ್ಯಾಳ.ಪಿ.ಬಿ. ಗ್ರಾಮದ ಸಂಗನಬಸವ ಶ್ರೀಗಳು, ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಕರ್ನಾಟಕ ರಾಜ್ಯ ಹಸಿರು ಸೇನೆ ಮಹಾದೇವಪ್ಪ ತೇಲಿ, ಸಿದ್ದನಗೌಡ ಪಾಟೀಲ, ಹೊನಕೇರೆಪ್ಪ ತೆಲಗಿ, ಗುರಲಿಂಗಪ್ಪ ಪಡಸಲಗಿ, ಈರಣ್ಣ ದೇವರಗುಡಿ, ಮೌಲಾಸಾಬ ಸಾತಲಗಾವಿ, ರಾಮನಗೌಡ ಹಾದಿಮನಿ, ಎಚ್. ನಂದುಣಗಿ, ಅಶೋಕ ಉಪ್ಪಲದಿನ್ನಿ, ಗುರುರಾಜ ಪಡಶೆಟ್ಟಿ, ನೀಲಾಂಬಿಕಾ ಪಾಟೀಲ, ಜಗದೇವ ಸೂರ್ಯವಂತಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))