ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅನಧಿಕೃತ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವ ಕುರಿತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದನ್ನು ರೈತ ಮುಖಂಡರು ಖಂಡಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕಿನಾದ್ಯಂತ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಬೇಸಿಗೆ ಬಿಸಿಲಿನ ಝಳ ಮತ್ತಷ್ಟು ತೀವ್ರವಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಸ್ಥಗಿತಗೊಳ್ಳುವ ಚಿಂತೆಯಲ್ಲಿ ಇರುವ ರೈತರು ತಾವು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳುವತ್ತ ಚಿಂತಿಸುತ್ತಿದ್ದಾರೆ ಎಂದರು.ಈ ನಡುವೆ ಅನಧಿಕೃತ ವಿದ್ಯುತ್ ಸಂಪರ್ಕಗಳಿಂದ ಕಂಪನಿಗಳಿಗೆ ಆರ್ಥಿಕ ನಷ್ಟ, ಅಪಘಾತಗಳು ಸಂಭವಿಸುವ ಅಪಾಯವಿದೆ ಎಂದು ತಾಲೂಕು ವ್ಯಾಪ್ತಿ ಅನಧಿಕೃತ ವಿದ್ಯುತ್ ಸಂಪರ್ಕ ಕಂಡುಬಂದಲ್ಲಿ ತಕ್ಷಣವೇ ವಿದ್ಯುತ್ ನಿಲುಗಡೆ ಮಾಡಲಾಗುವುದು. ರೈತ ಸಮುದಾಯ ತಮ್ಮ ಐಪಿ ಸ್ಥಾವರಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹೊಸ ಶೀಘ್ರ ಸಂಪರ್ಕ ಯೋಜನೆ (ಎನ್.ಎಸ್.ಎಸ್.ವೈ) ಅನುಸಾರ ನಿಗಮಕ್ಕೆ ನಿಗಧಿತ ಶುಲ್ಕ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಬೇಕು ಸೆಸ್ಕಾಂ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದನ್ನು ಖಂಡಿಸಿದರು.
ತಾಲೂಕಿನಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಪಂಪ್ ಸೆಟ್ ಆಧಾರಿತ ಕೃಷಿಕರಿದ್ದು. ವಿದ್ಯುತ್ ಇಲಾಖೆ ಲಂಚಗುಳಿತದಿಂದ ಕೆಲವರು ಹಣ ಹೊಂದಿಸಲಾಗದೆ ತಮ್ಮ ಐ.ಪಿ ಸೆಟ್ಟುಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಕೃಷಿಯನ್ನೆ ನಂಬಿ ಬದುಕುತ್ತಿರುವ ರೈತನಿಗೆ ನೀರು ಮತ್ತು ವಿದ್ಯುತ್ ಅತ್ಯಗತ್ಯ ಎಂದರು.
ವಿದ್ಯುತ್ ಆಧಾರಿತ ರೈತರು ತಾಲೂಕಿನಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ತೆಂಗು, ಅಡಿಕೆ, ಕಬ್ಬು, ಬಾಳೆ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. ರೈತನಿಗೆ ಇಂದು ಕೃಷಿ ಲಾಭದಾಯಕವಾಗಿಲ್ಲ. ಇದರ ಪರಿಣಾಮ ರೈತ ಸಾಲಗಾರನಾಗಿದ್ದಾನೆ. ಈಗ ವಿದ್ಯುತ್ ಇಲಾಖೆ ಅಕ್ರಮ ಸಂಪರ್ಕಗಳ ಬೆದರಿಕೆ ಹಾಕುವುದು ಸರಿಯಲ್ಲ ಎಂದರು.
ರೈತನ ಬದುಕು ಆತ ಬೆಳೆಯುವ ಬೆಳೆಗಳ ಮೇಲೆ ನಿಂತಿದೆ. ವಿದ್ಯುತ್ ಇಲಾಖೆ ಜಾರಿಗೆ ತಂದಿರುವ ಹೊಸ ಶೀಘ್ರ ಸಂಪರ್ಕ ಯೋಜನೆ(ಎನ್.ಎಸ್.ಎಸ್.ವೈ)ಗೆ ರೈತಸಂಘದ ವಿರೋಧವಿಲ್ಲ. ಆದರೆ, ನಿಗಧಿತ ಶುಲ್ಕವನ್ನು ಪಾವತಿಸಿ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಿಕೊಳ್ಳದಿದ್ದರೆ ವಿದ್ಯುತ್ ಸಂಪರ್ಕ ಬಂದ್ ಮಾಡುವ ಇಲಾಖೆ ಬೆದರಿಕೆ ನೀತಿಗೆ ನಮ್ಮ ವಿರೋಧವಿದೆ. ಇದರಿಂದ ರೈತ ಆತ್ಮಹತ್ಯೆ ಹಾದಿ ತುಳಿಯಲಿದ್ದಾನೆ ಎಂದು ಎಚ್ಚರಿಸಿದರು.ವಿದ್ಯುತ್ ಇಲಾಖೆ ಯಾವುದೇ ಮುನ್ಸೂಚನೆಯಿಲ್ಲದೆ ಅನಧಿಕೃತ ಪಂಪ್ ಸೆಟ್ಟುಗಳ ವಿದ್ಯುತ್ ಸಂಪರ್ಕ ಬಂದ್ ಮಾಡುವ ಬದಲು ರೈತರಿಗೆ ಒಂದಷ್ಟು ಕಾಲಾವಕಾಶ ನೀಡಿ ಜಾಗೃತಗೊಳಿಸುವ ಕೆಲಸ ಮಾಡಲಿ. ಅದನ್ನು ಬಿಟ್ಟು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬೆಳೆದ ಬೆಳೆ ಹಾಳು ಮಾಡಲು ಮುಂದಾದರೆ ತಾಲೂಕು ರೈತಸಂಘ ಉಗ್ರ ಹೋರಾಟಕ್ಕಿಳಿಯಲಿದೆ ಎಚ್ಚರಿಸಿದರು.