ನಾಲ್ವಡಿ ಒಡೆಯರ್ ಕುರಿತು ಯತೀಂದ್ರ ಹೇಳಿಕೆ ಖಂಡಿಸಿ ರೈತರಿಂದ ಪ್ರತಿಭಟನೆ

| Published : Jul 30 2025, 12:45 AM IST

ನಾಲ್ವಡಿ ಒಡೆಯರ್ ಕುರಿತು ಯತೀಂದ್ರ ಹೇಳಿಕೆ ಖಂಡಿಸಿ ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯತೀಂದ್ರ ನಾಲ್ವಡಿ ಕುರಿತು ತನ್ನ ಮನೆಯಲ್ಲಿ ಮಾತನಾಡಿಕೊಳ್ಳದೆ ಸಾರ್ವಜನಿಕವಾಗಿ ಮಾತನಾಡುವ ಮೂಲಕ ತಾನು ಅನಾಗರಿಕನಂತೆ ವರ್ತಿಸಿರುವುದು ವಿಪರ್‍ಯಾಸ, ಅಲ್ಲದೆ ಮೈಸೂರಿನಲ್ಲಿ ಸಿಕ್ಕಿರುವಂಥ ಡ್ರಗ್ಸ್ ದಂಧೆಯನ್ನು ಬಾಂಬೆ ಪೊಲೀಸರು ಕಂಡು ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮೈಸೂರು ರಾಜರಿಗಿಂತ ಹೆಚ್ಚಿನ ಕೊಡುಗೆ ನನ್ನ ತಂದೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ, ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ, ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ಸದಸ್ಯರು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯಧುವಂಶಸ್ಥರ ಹೆಸರು ಹೇಳಲು ಯೋಗ್ಯತೆ ಇಲ್ಲದ ವ್ಯಕ್ತಿಗಳು ಇಂದು ಅವರ ಕೊಡುಗೆ ಏನು ಇಲ್ಲ ಎಂದು ಹೇಳುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜರು ಅಣೆಕಟ್ಟೆ ಮಾತ್ರವಲ್ಲದೆ, ಶಿಕ್ಷಣ, ವಿದ್ಯುತ್, ಕಬ್ಬಿಣ ಕಾರ್ಖಾನೆ, ಸೋಪ್ ತಯಾರಿಕೆ ಸೇರಿ ಅನೇಕ ಉದ್ದಿಮೆಗಳ ತೆರೆದು ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ, ಅವರುಗಳ ಬದುಕಿಗೆ ಬೆಳಕಾಗಿದ್ದರು. ಇಂತಹವರ ವಿರುದ್ಧ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೋರಿ, ದೊಡ್ಡ ಮನುಷ್ಯನಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇವರು ಯಾವುದೇ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಮೈಸೂರು ಮಹಾರಾಜರುಗಳಿಂದ ಅನುಕೂಲ ಪಡೆದ ಪ್ರತಿಯೊಬ್ಬರೂ ಇವರ ವಿರುದ್ಧ ಮತ ಹಾಕಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಕೆ.ಎಸ್ ನಂಜುಂಡೇಗೌಡ ಮಾತನಾಡಿ, ಮೈಸೂರು ಮಹಾರಾಜರು ಏಷಿಯಾ ಖಂಡದಲ್ಲೇ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಕಂಡು ಹಿಡಿದಿದ್ದು ದಾಖಲೆ, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ತನ್ನ ಸೊಸೆ ಹೆಸರಿನಲ್ಲಿ ಏಷಿಯಾ ಖಂಡದಲ್ಲೇ ದೊಡ್ಡದಾದಂಥ ಒಂದು ಪಬ್ ಕಟ್ಟಿಸುವ ಮೂಲಕ ತಮ್ಮ ಕುಟುಂಬದ ದೊಡ್ಡ ಆಸ್ತಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಯತೀಂದ್ರ ನಾಲ್ವಡಿ ಕುರಿತು ತನ್ನ ಮನೆಯಲ್ಲಿ ಮಾತನಾಡಿಕೊಳ್ಳದೆ ಸಾರ್ವಜನಿಕವಾಗಿ ಮಾತನಾಡುವ ಮೂಲಕ ತಾನು ಅನಾಗರಿಕನಂತೆ ವರ್ತಿಸಿರುವುದು ವಿಪರ್‍ಯಾಸ, ಅಲ್ಲದೆ ಮೈಸೂರಿನಲ್ಲಿ ಸಿಕ್ಕಿರುವಂಥ ಡ್ರಗ್ಸ್ ದಂಧೆಯನ್ನು ಬಾಂಬೆ ಪೊಲೀಸರು ಕಂಡು ಹಿಡಿದಿದ್ದಾರೆ. ನಿಮ್ಮ ಅಪ್ಪ ಸಿದ್ದರಾಮಯ್ಯ ಎಲ್ಲಿದ್ದರು, ರಾಜ್ಯದ ಆಡಳಿತ ಸತ್ತಿದಿಯಾ? ನಿಮ್ಮ ಆಡಳಿತಕ್ಕೆ ಮೂರು ಕಾಸಿನ ಬೆಲೆ ಇಲ್ಲ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಕಾರ್ಯದರ್ಶಿ ಎಂ.ವಿ ಕೃಷ್ಣ, ಖಜಾಂಚಿ ಮಹಾದೇವು, ದರ್ಶನ್, ಹನಿಯಂಬಾಡಿ ನಾಗರಾಜು, ಜಯರಾಮು, ಮಹದೇವು, ರಾಮಚಂದ್ರು, ಶಿವಣ್ಣ, ರಾಮಕೃಷ್ಣ, ಪುರುಷೋತ್ತಮ್, ಸತ್ಯನಾರಾಯಣ್, ಶಿವರಾಜು, ಶಂಕರ್, ಮಹೇಶ್, ರಾಮಕೃಷ್ಣ, ಕೆಂಪೇಗೌಡ ಸೇರಿ ನೂರಾರು ಮಂದಿ ಹಾಜರಿದ್ದರು.