ಸಾರಾಂಶ
ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಮುಧೋಳ-ಯಾದವಾಡ ಸರ್ಕಲ್ ನಲ್ಲಿರುವ ಕೆನರಾ ಬ್ಯಾಂಕಿಗೆ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮುಧೋಳ
ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಮುಧೋಳ-ಯಾದವಾಡ ಸರ್ಕಲ್ ನಲ್ಲಿರುವ ಕೆನರಾ ಬ್ಯಾಂಕಿಗೆ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿದರು.ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಮುಧೋಳ ತಾಲೂಕಿನಲ್ಲಿ ಸುಮಾರು 900 ಕಟಬಾಕಿ ರೈತರ ಪೈಕಿ ಕೆಲವು ರೈತರಿಗೆ ಅರೆಸ್ಟ್ ವಾರಂಟ್ ಬಂದಿದ್ದು, ರೈತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿ, ಕಬ್ಬಿನ ಬಿಲ್ ಬಾಕಿ ಹಾಗೂ ಇತರೆ ಅನಿವಾರ್ಯ ಕಾರಣಗಳಿಂದ ಕೆಲವು ರೈತರು ಕಟಾಬಾಕಿದಾರರಾಗಿದ್ದಾರೆ. ಕಾರಣ ಬ್ಯಾಂಕಿನವರು ಇನ್ಮುಂದೆ ರೈತರ ಮೇಲೆ ಯಾವುದೇ ರೀತಿಯ ಕೇಸ್ ಹಾಕಬಾರದು. ಈಗಿರುವ ಕೇಸ್ ಹಿಂಪಡೆದುಕೊಳ್ಳಬೇಕು. ಈ ಹಿಂದಿನ ಮಾದರಿಯಲ್ಲಿ ಎಲ್ಲ ರೈತರಿಗೂ ಒನ್ ಟೈಮ್ ಸೆಟಲ್ಮೆಂಟ್ ಗೆ ಅವಕಾಶ ಕೊಡಬೇಕೆಂದು ಅಗ್ರಹಿಸಿದರು.
ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ರೈತರು ಬ್ಯಾಂಕ್ ಬಂದ್ ಮಾಡಿ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.ರೈತರಿಗೆ ಮನವಿ ಮಾಡಿಕೊಂಡ ಬ್ಯಾಂಕ್ ಅಧಿಕಾರಿಗಳು 3-4 ದಿನಗಳಲ್ಲಿ ಸಭೆ ಕರೆದು ತಮ್ಮ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ರೈತರು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ ಎಂದು ಘೋಷಿಸಿದರು.
ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ರೈತ ಮುಖಂಡರಾದ ಈರಪ್ಪ ಹಂಚಿನಾಳ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗಣ್ಣವರ, ಶಿವಲಿಂಗಪ್ಪ ತುಬಚಿ, ಮಲ್ಲು ರೆಡ್ಯಾರಟ್ಟಿ, ರಮೇಶ ಹೂಗಾರ, ನಾಗರಾಜ್ ಪೂಜಾರಿ ಮುಂತಾದವರು ಇದ್ದರು.