ಸಾರಾಂಶ
ಗದಗ: ಈರುಳ್ಳಿ ದರ ಬುಧವಾರ ದಿಢೀರ್ ಕುಸಿತವಾಗಿದ್ದು, ಕ್ವಿಂಟಲ್ ಈರುಳ್ಳಿಗೆ ₹100ರಿಂದ 300ಕ್ಕೆ ಇಳಿದಿದ್ದು, ಇದರಿಂದ ಆಕ್ರೋಶಗೊಂಡ ಬೆಳೆಗಾರರು ಎಪಿಎಂಸಿಯಲ್ಲಿ ಪ್ರತಿಭಟನೆ ನಡೆಸಿದರು.
ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಎಂದಿನಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ತಮ್ಮ ಈರುಳ್ಳಿ ಮಾರಾಟಕ್ಕೆ ಕಾಯುತ್ತಾ ಕುಳಿತಿದ್ದರು. ಟೆಂಡರ್ ಪ್ರಕ್ರಿಯೆ ಪ್ರತಿದಿನಕ್ಕಿಂತಲೂ ತಡವಾಗಿಯೇ ಪ್ರಾರಂಭವಾಯಿತು. ಆದರೆ ಪ್ರಾರಂಭವಾದರೂ ದರದಲ್ಲಿ ಅತಿ ಕಡಿಮೆ ಘೋಷಣೆಯಾಗುತ್ತಿದ್ದಂತೆ ರೈತರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.ಕಳೆದ ವಾರ ಪ್ರತಿ ಕ್ವಿಂಟಲ್ ಈರುಳ್ಳಿಗೆ 800 ರಿಂದ 2000 ರು. ಇತ್ತು. ಆದರೆ ಬುಧವಾರ ಅದು 100 ರಿಂದ 300 ಕ್ಕೆ ಇಳಿಕೆಯಾಗಿತ್ತು.
ಒಂದೆರಡು ಅಂಗಡಿಗಳಲ್ಲಿ ಮಾತ್ರ ಹೀಗಾಗಿಲ್ಲ. ಇಡೀ ಮಾರುಕಟ್ಟೆಯ ತುಂಬೆಲ್ಲಾ ಖರೀದಿದಾದರೇ ಉದ್ದೇಶಪೂರ್ವಕವಾಗಿ ದರದಲ್ಲಿ ಭಾರೀ ಕುಸಿತ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಂಗಡಿಗಳ ಮುಂದೆ ರೈತರು ಪ್ರತಿಭಟನೆಗೆ ಮುಂದಾದರು.ಈ ವೇಳೆ ಈರುಳ್ಳಿ ಖರೀದಿ ಅಂಗಡಿ ಮಾಲೀಕರು ಮತ್ತು ರೈತರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಒಂದೆರಡು ಅಂಗಡಿಗಳಲ್ಲಿದ್ದ ಪ್ರತಿಭಟನೆ ಕೆಲ ಹೊತ್ತಿನಲ್ಲಿಯೇ ಎಪಿಎಂಸಿ ತುಂಬೆಲ್ಲ ಹರಡಿ ಎಲ್ಲ ಅಂಗಡಿಗಳ ಮುಂದೆ ರೈತರು ಪ್ರತಿಭಟನೆ ಮಾಡಿದರು. ಅಲ್ಲದೇ ಎಪಿಎಂಸಿ ಮುಖ್ಯ ರಸ್ತೆಗೆ ಆಗಮಿಸಿ ಪ್ರತಿಭಟನೆ ನಡೆಸಿ, ಕೂಡಲೇ ಮರು ಟೆಂಡರ್ ನಡೆಸುವಂತೆ ಒತ್ತಾಯಿಸಿದರು.
ಪ್ರತಿ ಕ್ವಿಂಟಲ್ ಈರುಳ್ಳಿ ನೂರು ರುಪಾಯಿಯಿಂದ ಕೇವಲ ಮೂರುನೂರು ರುಪಾಯಿವರೆಗೆ ಮಾರಾಟವಾಗುತ್ತಿದೆ. ಇಷ್ಟೊಂದು ಕಡಿಮೆ ದರಕ್ಕೆ ಮಾರಾಟ ಮಾಡಿದರೆ ರೈತರಿಗೆ ಮಾರಾಟಕ್ಕೆ ಈರುಳ್ಳಿ ತಂದಿರುವ ವಾಹನದ ಬಾಡಿಗೆ ಕೊಡಲು ಆಗುವುದಿಲ್ಲ. ರಾಜ್ಯದ ಬೇರೆ ಬೇರೆ ಮಾರುಕಟ್ಟೆಯಲ್ಲಿ ಉತ್ತಮವಾದ ದರವಿದೆ. ಆದರೆ ಗದಗ ಮಾರುಕಟ್ಟೆಯಲ್ಲಿ ಮಾತ್ರ ಹೀಗೆ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಿ ನಮಗೆ ನ್ಯಾಯಯುತ ದರ ನೀಡಬೇಕು ಎಂದು ಒತ್ತಾಯಿಸಿದರು.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಎಪಿಎಂಸಿ ಅಧಿಕಾರಿಗಳು ರೈತರ ಮನವೊಲಿಸಲು ಹರಸಾಹಸಪಟ್ಟರು. ಆದರೆ ಪಟ್ಟು ಬಿಡದ ರೈತರು ಗದಗ ಮಾರುಕಟ್ಟೆಯಲ್ಲಿ ಮರು ಟೆಂಡರ್ ಮಾಡಬೇಕು, ಉತ್ತಮ ದರ ಕೊಡಬೇಕು ಎಂದು ಆಗ್ರಹಿಸಿದಾಗ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿ ಕೆಲಕಾಲ ಈರುಳ್ಳಿ ಖರೀದಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತು.
ಸಂಜೆ ಪ್ರಾರಂಭ: ಬುಧವಾರ ಮಧ್ಯಾಹ್ನವೇ ರೈತರ ಆಕ್ರೋಶದಿಂದ ಸ್ಥಗಿತಗೊಂಡಿದ್ದ ಈರುಳ್ಳಿ ಖರೀದಿ ಪ್ರಕ್ರಿಯೆ ಸಂಜೆ 4 ಗಂಟೆಯ ಪ್ರಾರಂಭವಾಯಿತು. ಈ ವೇಳೆ ಕೆಲ ರೈತರ ಈರುಳ್ಳಿ ಮಾತ್ರ ಹೆಚ್ಚಿನ ದರಕ್ಕೆ (300 ರಿಂದ1500) ಮಾರಾಟವಾಗಿದ್ದು, ಇನ್ನುಳಿದ ರೈತರ ಈರುಳ್ಳಿ ಮತ್ತೆ ಕಡಿಮೆ ದರದಲ್ಲಿ ಮಾರಾಟವಾದ ಹಿನ್ನೆಲೆ ರೈತರಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))