ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 135 ದಿನ ಪೂರೈಸಿದೆ. ಬುಧವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ರೈತರ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಅವರ ಬೇಡಿಕೆಗಳನ್ನು ಆಲಿಸಿದರು.

ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 135 ದಿನ ಪೂರೈಸಿದೆ. ಬುಧವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ರೈತರ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಅವರ ಬೇಡಿಕೆಗಳನ್ನು ಆಲಿಸಿದರು.ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ತಿಂಗಳುಗಳಿಂದ ನೂರಾರು ರೈತರು ನ್ಯಾಯವನ್ನು ಆಗ್ರಹಿಸಿ ಬೀದಿಯಲ್ಲಿ ಕುಳಿತಿದ್ದಾರೆ. ಜಿಲ್ಲೆಯ ಪ್ರಮುಖರು ಪಕ್ಷಾತೀತವಾಗಿ ಸರಕಾರದ ಮಟ್ಟದಲ್ಲಿ ಗಮನ ಸೆಳೆಯಬೇಕು. ಮಾತ್ರವಲ್ಲದೆ ಸರಕಾರ ಬಡ ರೈತರನ್ನು ಸತಾಯಿಸದೆ ಆದಷ್ಟು ಶೀಘ್ರು ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಈಗಾಗಲೇ ಜಿಲ್ಲಾಡಳಿತದಿಂದ ರೈತರ ಬೇಡಿಕೆಗೆ ಪೂರ್ಣ ಸಹಮತ ನೀಡಲಾಗಿದೆ. ಮಾತ್ರವಲ್ಲದೆ ರಾಜ್ಯ ಸರಕಾರಕ್ಕೆ ಸಂಪೂರ್ಣ ವರದಿ ನೀಡಿದ್ದು ಸರಕಾರದ ಮಟ್ಟದಲ್ಲಿ ನಿರ್ಣಯವಾಗಬೇಕಾಗಿದೆ. ರೈತರ ಧರಣಿ ವರದಿ ಸರಕಾರದ ಗಮನದಲ್ಲಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಸರ್ಕಾರದ ನಿರ್ಣಯ ವಿಳಂಬವಾಗದೆ ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನ‌ರ್ ರಶ್ಮಿ ಎಸ್.ಆರ್, ಬೈಂದೂರು ತಹಸೀಲ್ದಾರ್ ರಾಮಚಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ರೈತ ಮುಖಂಡರಾದ ಅರುಣ್ ಕುಮಾರ್ ಶಿರೂರು ವೀರಭದ್ರ ಗಾಣಿಗ, ಪದ್ಮಾಕ್ಷ ಗೋಳಿಬೇರು, ಹೆರಿಯಣ್ಣ ಪೂಜಾರಿ, ಸುಭಾಷ್ ಗಂಗನಾಡು, ರಾಮ ಮಯ್ಯಾಡಿ, ಸ್ಕರಿಯನ್, ನಾರಾಯಣ ಪೂಜಾರಿ ಯಳಜಿತ್, ಪೌಲೂಸ್, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು ಹಾಗೂ ರೈತ ಬಾಂಧವರು ಹಾಜರಿದ್ದರು.