ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಬಿಲ್ ಕೊಡದೇ ಸತಾಯಿಸುತ್ತಿರುವುದನ್ನು ಖಂಡಿಸಿ ರೈತ ಸಂಘಟನೆಗಳು ನೇತೃತ್ವದಲ್ಲಿ ಮಂಗಳವಾರ ತಾಲೂಕಿನ ಆಲಗೂರು ಬಳಿಯ ಗೌಡರಗಡ್ಡೆ ಪ್ರದೇಶದಲ್ಲಿ ಜಮಾಯಿಸಿದ ರೈತರು ವಿಜಯಪುರ-ಜಮಖಂಡಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕಬ್ಬಿನ ಬಿಲ್ ಪಾವತಿಗೆ ಸರ್ಕಾರ ಏಪ್ರಿಲ್ ತಿಂಗಳ ಗಡುವು ನೀಡಿತ್ತು. ಮೇ ತಿಂಗಳು ಮುಗಿಯಲು ಬಂದರೂ ಸಹ ಸಕ್ಕರೆ ಕಾರ್ಖಾನೆಗಳು ಬಿಲ್ ಪಾವತಿಸದೇ ಕಬ್ಬು ಪೂರೈಸಿದ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಸರ್ಕಾರದ ಆದೇಶದಂತೆ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದರು.ರೈತರ ಪ್ರತಿಭಟನೆಯಿಂದಾಗಿ ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿಜಯಪುರಕ್ಕೆ ಹೋಗಬೇಕಿದ್ದ ಬಸ್‌ಗಳು ಸಾವಳಗಿ, ತೊದಲಬಾಗಿ, ಚಿಕ್ಕಲಕಿ ಕ್ರಾಸ್ ಮುಖಾಂತರ ತೆರಳಿದವು.
ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಅನೀಲ ಬಡಗೇರ ಅವರು ರೈತರೊಂದಿಗೆ ಮಾತುಕತೆ ನಡೆಸಿದರು. ಜಮಖಂಡಿ ಸಕ್ಕರೆ ಕಾರ್ಖಾನೆ ₹30 ಕೋಟಿ ಹಾಗೂ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ₹25 ಕೋಟಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, 8 ದಿನಗಳಲ್ಲಿ ಎಲ್ಲಾ ಬಾಕಿ ಬಿಲ್ ಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಭರವಸೆ ನೀಡಿ ತಿಳಿಸಿ ರೈತರ ಮನವೊಲಿಸಿದ ಪರಿಣಾಮ ರೈತರು ಧರಣಿ ಹಿಂತೆಗೆದುಕೊಂಡರು.ರೈತರ ಎಚ್ಚರಿಕೆ:
ಸರ್ಕಾರದ ಪರವಾಗಿ ಅಧಿಕಾರಿಗಳು ನೀಡಿರುವ ಭರವಸೆಯಿಂದ ರೈತ ಮುಖಂಡರು ಧರಣಿ ಕೈಬಿಟ್ಟಿದ್ದು ಗಡವು ಮುಗಿದ ಮೇಲೆ ಭರವಸೆಗಳು ಈಡೆರದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದೆಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. 8 ದಿನಗಳಲ್ಲಿ ಬಾಕಿ ಬಿಲ್ ಪಾವತಿಯಾಗಬೇಕು, 3 ದಿನದಲ್ಲಿ ನದಿಗೆ ನೀರು ಬಿಡಿಸಬೇಕು, ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಶ್ರೀಶೈಲ ಭೂಮಾರ, ರಾಜು ನದಾಫ್, ಕಲ್ಲಪ್ಪ ಬಿರಾದಾರ, ಸಿದ್ದುಗೌಡ ಪಾಟೀಲ, ಸಿದ್ದಪ್ಪ ಬಣಜಗಾರ, ಸುರೇಶ ಹಂಚಿನಾಳ, ಧರೆಪ್ಪ ದಾನಗೌಡ, ಬಾಹುಬಲಿ ನ್ಯಾಮಗೌಡ, ಸದಾಶಿವ ಕಲೂತಿ, ಶವಪ್ಪ ಕುರಣಿ, ಸುರೆಶ ಹಂಚಿನಾಳ ಸದಪ್ಪ ಮಂಟೂರ ಇತರರು ಇದ್ದರು.
ಮೂರು ದಿನಗಳಲ್ಲಿ ಕೃಷ್ಣಾ ನದಿಗೆ ನೀರು: ಕೃಷ್ಣಾ ನದಿ ಬತ್ತಿ ಹೋಗಿದ್ದು, ಸರ್ಕಾರ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಮೂರು ದಿನಗಳಲ್ಲಿ ನದಿಗೆ ನೀರು ಬರಲಿದೆ ಎಂದು ರೈತರಿಗೆ ಭರವಸೆ ನೀಡಿದರು. ನದಿಯಲ್ಲಿ ನೀರಿಲ್ಲದ ಕಾರಣ ಬೆಳೆದು ನಿಂತಿರುವ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕ್ರಮ ಜರುಗಿಸಲಿದೆ ಎಂದು ಹೇಳಿದರು.