ಚಿಚಖಂಡಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

| Published : May 11 2024, 12:32 AM IST

ಸಾರಾಂಶ

ಹಿಡಕಲ್‌ ಜಲಾಶಯದಿಂದ ಘಟಪ್ರಭ ನದಿಗೆ ನೀರು ಹರಿಸಲು ಆಗ್ರಹಿಸಿ ರೈತರು ಗುರುವಾರ ಮತ್ತೆ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಹಿಡಕಲ್‌ ಜಲಾಶಯದಿಂದ ಘಟಪ್ರಭ ನದಿಗೆ ನೀರು ಹರಿಸಲು ಆಗ್ರಹಿಸಿ ಮೇ.8ರಂದು ರೈತರು ಧರಣಿ ನಡೆಸಿದ್ದರು. ತಹಸೀಲ್ದಾರ್‌ ವಿನೋದ ಹತ್ತಳ್ಳಿ ನೀರು ಬಿಡಿಸುವ ಭರವಸೆ ನೀಡಿದ್ದರಿಂದ ರೈತರು ಹೋರಾಟ ಕೈಬಿಟ್ಟಿದ್ದರು. ಆದರೆ, ಭರವಸೆ ಈಡೇರದ ಕಾರಣ ರೊಚ್ಚಿಗೆದ್ದ ರೈತರು ಗುರುವಾರ ಮತ್ತೆ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಬೆಳಗ್ಗೆ ರೈತರು ತಹಸೀಲ್ದಾರ್‌ ಕಚೇರಿ ಬಳಿ ಸೇರಿ ಸಭೆ ನಡೆಸಿ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರರಿಗೆ ತರಾಟೆಗೆ ತೆಗೆದುಕೊಂಡ ರೈತರು, ತಾವು ಹೇಳಿದಂತೆ ನೀರು ಬಿಡಿಸಿಲ್ಲ, ನೀವು ಮಾತಿಗೆ ತಪ್ಪಿದ್ದಿರಿ, ರೈತರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದಿರಿ ಎಂದರು. ರೈತರ ಈ ಪ್ರಶ್ನೆಗೆ ತಹಸೀಲ್ದಾರರ ಬಳಿ ಯಾವುದೇ ಉತ್ತರವಿಲ್ಲದ ಅವರು ಮೌನಕ್ಕೆ ಶರಣಾದರು.

ಶುಕ್ರವಾರ ರಾತ್ರಿಯೊಳಗಾಗಿ ಘಟಪ್ರಭ ನದಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸದಿದ್ದರೆ ಶನಿವಾರ ಪ್ರತಿಭಟನೆಯ ರೂಪುರೇಷೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಹೆದ್ದಾರಿಯಲ್ಲೇ ಅಡುಗೆ ತಯಾರಿಸಿದ ರೈತರು:

ಚಿಂಚಖಂಡಿ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿ ಮೇಲೆ ಕುಳಿತು ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆದಲ್ಲಿಯೇ ಒಲೆ ಹೂಡಿ ಅಡುಗೆ ಸಿದ್ಧಪಡಿಸಿ ಊಟ ಮಾಡಿದರು. ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನ ಸವಾರರರು, ಪ್ರಯಾಣಿಕರು ಪರದಾಡುವಂತಾಯಿತು. ಕೆಲಕಾಲ ವಾಹನಗಳು ಬೇರೆ ಮಾರ್ಗದ ಮೂಲಕ ಸಂಚಾರ ನಡೆಸಿದವು.