ಬೆಸ್ಕಾಂ ಕಚೇರಿಗೆ ಬೀಗ ಹಾಕಿ ರೈತರ ಪ್ರತಿಭಟನೆ

| Published : Feb 16 2025, 01:49 AM IST

ಸಾರಾಂಶ

ಬೇಸಿಗೆ ಆರಂಭದಲ್ಲೇ ಕರೆಂಟ್ ಸಮಸ್ಯೆ ರೈತಾಪಿ ವರ್ಗವನ್ನು ಕಂಗಾಲಾಗಿಸಿದೆ. ಸುಮಾರು 20 ಗ್ರಾಮಕ್ಕೆ ಏಕಾಏಕಿ ಕರೆಂಟ್ ನೀಡುವುದು ಕಡಿಮೆ ಆಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಇಲ್ಲಿನ ಬೆಸ್ಕಾಂ ಕಚೇರಿಗೆ ಮುಂದೆ ಜಮಾಯಿಸಿದ ನೂರಾರು ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಬಾಗಿಲು ಹಾಕಿ ಸುಮಾರು ಮೂರು ಗಂಟೆ ಪ್ರತಿಭಟನೆ ನಡೆಸಿದರು.

ದಿನಕ್ಕೆ ಅರ್ಧ ತಾಸು ತ್ರೀಫೇಸ್ ಕರೆಂಟ್ ನೀಡದ ಬೆಸ್ಕಾಂ ವಿರುದ್ಧ ಮಲ್ಲಪ್ಪನಹಳ್ಳಿ ಹಾಗೂ ಸುರುಗೇನಹಳ್ಳಿ ಸುಮಾರು ಹದಿನೈದು ಗ್ರಾಮದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ವಿದ್ಯಾ ಸಾಗರ್, ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರಿ ಪೋನ್ ಕೂಡಾ ಸ್ವಿಚ್ ಆಫ್ ಮಾಡುತ್ತಾರೆ. ಸಮಸ್ಯೆ ಆಲಿಸುವವರೇ ಹೀಗೆ ಮಾಡಿದರೆ ಸಾಲ ಮಾಡಿಕೊಂಡು ಹಾಕಿಸಿದ ಬೋರ್‌ವೆಲ್ ವಿಫಲವಾದರೆ ರೈತರು ಸಾಲ ತೀರಿಸಲಾಗದೆ ಮನೆ ತೋಟ ಮಾರಿಕೊಳ್ಳುವ ದುಸ್ಥಿತಿ ಎದುರಾಗಿದೆ.

ಬೇಸಿಗೆ ಆರಂಭದಲ್ಲೇ ಕರೆಂಟ್ ಸಮಸ್ಯೆ ರೈತಾಪಿ ವರ್ಗವನ್ನು ಕಂಗಾಲಾಗಿಸಿದೆ. ಸುಮಾರು 20 ಗ್ರಾಮಕ್ಕೆ ಏಕಾಏಕಿ ಕರೆಂಟ್ ನೀಡುವುದು ಕಡಿಮೆ ಆಗಿದೆ. ಓವರ್ ಲೋಡ್ ಎಂಬ ಪದ ಕೇಳಿ ಜಿಗುಪ್ಸೆ ಬಂದಿದೆ. ಅರ್ಧ ಗಂಟೆ ಕರೆಂಟ್ ಬಂದರೆ ತೋಟ ಉಳಿಯುವುದು ಕಷ್ಟ. ತೆಂಗು ಅಡಿಕೆ ನಂಬಿದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಲ್ಲಪ್ಪನಹಳ್ಳಿ ಭಾಗದಲ್ಲಿ ಚಿರತೆ ಕಾಟವಿದೆ. ರಾತ್ರಿ ವೇಳೆ ಇಡೀ ಗ್ರಾಮವೇ ಕಗ್ಗತ್ತಲಲ್ಲಿ ಇದ್ದು ಸಾಕು ಪ್ರಾಣಿಗಳನ್ನು ಚಿರತೆ ಹೊತ್ತೊಯ್ದ ಘಟನೆ ಸಾಕಷ್ಟು ನಡೆದಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೇಳಿದರೆ ಸಿಸಿ ಕ್ಯಾಮೆರಾ ಹಾಕಿಸಿಕೊಳ್ಳಿ ಅನ್ನುತ್ತಾರೆ. ನಾವೇನು ಮಾಡಬೇಕು ಎಂಬುದು ಅರಿಯದಾಗಿದೆ. ಎಲ್ಲದಕ್ಕೂ ವಿದ್ಯುತ್ ಸಮಸ್ಯೆ ಮೂಲವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಎಲ್ಲಾ ಕರೆಂಟ್ ಸಮಸ್ಯೆಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ನೀಡಬೇಕು. ಅಲ್ಲಿಯವರೆವಿಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ಮಾಜಿ ಸದಸ್ಯ ಗಂಗಾಧರ್ ಮಾತನಾಡಿ, ಸರ್ಕಾರ ಏಳು ಗಂಟೆ ತ್ರೀ ಫೇಸ್ ಕರೆಂಟ್ ಎಂದು ಹೇಳಿತ್ತು. ಆದರೆ ಬೇಸಿಗೆ ಹುಟ್ಟುವ ಮುನ್ನವೇ ಕರೆಂಟ್ ಖೋತಾ ಎದುರಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಮೂರು ತಾಸು ಪ್ರತಿಭಟನೆ ನಡೆಸಿದರೂ ಇಲ್ಲಿ ಕೇಳುವವರಿಲ್ಲ. ಸಹಾಯಕ ಅಭಿಯಂತರರು ಪೋನ್ ಕರೆ ಸ್ವೀಕರಿಸಲಿಲ್ಲ. ಈಗ ಬಂದೆ ಎನ್ನುತ್ತಲೇ ಮೂರು ತಾಸು ಕಳೆದಿದ್ದಾರೆ. ಕಚೇರಿ ಬಾಗಿಲು ಹಾಕಿದರೂ ಯಾಕೆ ಎಂದು ಕೇಳುವವರಿಲ್ಲ ಎಂದರೆ ಬೆಸ್ಕಾಂ ಅಧಿಕಾರಿಗಳ ಕಾರ್ಯ ವೈಖರಿ ಮೆಚ್ಚುವಂತದ್ದು ಎಂದು ವ್ಯಂಗ್ಯವಾಡಿದರು.ಉಚಿತ ಕರೆಂಟ್ ರೈತರಿಗೆ ಬೇಕಿಲ್ಲ. ನಮ್ಮ ತೆರಿಗೆ ಹಣದಲ್ಲಿ ವೇತನ ಪಡೆಯುವ ಬೆಸ್ಕಾಂ ಅಧಿಕಾರಿಗಳು ರೈತರ ಕೆಲಸ ಮಾತ್ರ ಮಾಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದಿನವಿಡೀ ಧರಣಿ ನಡೆಸಿದರೂ ರೈತರನ್ನು ಕಡೆಗಣಿಸುವ ಕೆಲಸ ಅಧಿಕಾರಿಗಳು ಮಾಡಬಾರದು. ಅರಣ್ಯ ಪ್ರದೇಶದ ಪಕ್ಕದ ತೋಟದ ಮನೆಯಲ್ಲಿ ಚಿರತೆ ಕಾಟ ಹೆಚ್ಚಿದೆ. ಹಸು ಕರು, ಮೇಕೆ, ಕುರಿ, ನಾಯಿ ಹೊತ್ತೊಯ್ದ ಚಿರತೆ ರೈತರ ಮಕ್ಕಳನ್ನು ಬಲಿ ಪಡೆಯುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಬೆಸ್ಕಾಂ ಅಧಿಕಾರಿಗಳು ನೇರ ಹೊಣೆ ಆಗಬೇಕು ಎಂದು ಕಿಡಿಕಾರಿದರು.ಮೂರು ತಾಸು ಕಳೆದ ಬಳಿಕ ಸ್ಥಳಕ್ಕೆ ಬಂದ ಪೊಲೀಸರ ಜೊತೆ ಪ್ರತಿಭಟನಾಕಾರರು ವಾಗ್ವಾದಕ್ಕೆ ಇಳಿದರು. ನಂತರ ಧಾವಿಸಿದ ಬೆಸ್ಕಾಂ ಎಇಇ ಜಲದೀಶ್ ಅವರ ವರ್ತನೆಗೆ ಸಿಡಿಮಿಡಿಗೊಂಡ ಪ್ರತಿಭಟನಾಕಾರರು ಆಕ್ರೋಶ ಭರಿತ ಮಾತಿನ ಚಕಮಕಿ ನಡೆಸಿದರು. ನಂತರ ತಿಳಿಯಾದ ವಾತಾವರಣದಲ್ಲಿ ಚರ್ಚಿಸಿ ಸಮಸ್ಯೆ ಆಲಿಸಿದರು. ಎರಡು ಫೀಡರ್‌ಗೆ ಸಮರ್ಪಕ ಕರೆಂಟ್ ತಂದು ಪ್ರತಿ ದಿನ ಮೂರು ತಾಸು ತ್ರೀಫೇಸ್ ಕರೆಂಟ್ ಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚೇತನ್ ನಾಯಕ್, ನರಸಿಂಹರಾಜು, ರಂಗಸ್ವಾಮಿ, ಬಸವರಾಜು, ಮುಳ್ಕಟ್ಟಯ್ಯ, ಮೂರ್ತಿ, ಪ್ರಕಾಶ್, ಕೃಷ್ಣಪ್ಪ, ಮಲ್ಲಿಕಾರ್ಜುನ, ಪಾತಯ್ಯ ಇತರರು ಇದ್ದರು. 15 ಜಿ ಯು ಬಿ 1

ಗುಬ್ಬಿ ಬೆಸ್ಕಾಂ ಕಚೇರಿಗೆ ಮುಂದೆ ಜಮಾಯಿಸಿದ ನೂರಾರು ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಬಾಗಿಲು ಹಾಕಿ ಸುಮಾರು ಮೂರು ಗಂಟೆ ಪ್ರತಿಭಟನೆ ನಡೆಸಿದರು.