ಹೂವಿನಹಡಗಲಿ: ರಾಜ್ಯದ ವಿದ್ಯುತ್‌ ಇಲಾಖೆಯನ್ನು ಟಾಟಾ ಪವರ್‌ ವಿದ್ಯುತ್‌ ಕಂಪನಿಗೆ ನೀಡುವಂತೆ ಸಲ್ಲಿಸಿದ ಅರ್ಜಿಯನ್ನು ಕೂಡಲೇ ಸರ್ಕಾರ ತಿರಸ್ಕರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಕೆಆರ್‌ಎಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ತಹಸೀಲ್ದಾರ್‌ಗೆ ರೈತರು ಘೇರಾವ್‌ ಹಾಕಿ, ರಸ್ತೆ ಬಂದ್‌ ಮಾಡಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ಜರುಗಿತ್ತು. ಮನವಿ ಸಲ್ಲಿಸಲು ಒಂದು ತಾಸಿಗೂ ಹೆಚ್ಚು ಸಮಯ ಪ್ರತಿಭಟನಾಕಾರರು ಕಾಯ್ದು ಸುಸ್ತಾದರು. ಈ ವೇಳೆ ರೈತರ ತಾಳ್ಮೆ ಕಟ್ಟೆ ಒಡೆದು ಹೋಗಿತ್ತು. ಪ್ರತಿಭಟನಾಕಾರರು ತಹಸೀಲ್ದಾರ್‌ ವಿರುದ್ಧ ಘೋಷಣೆ ಕೂಗುತ್ತಾ, ರಸ್ತೆ ಮೇಲೆ ಮಲಗಿ ಘೇರಾವ್‌ ಹಾಕಿದರು.

ರೈತರು ದಿಢೀರ್‌ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ಕಾವು ತೀವ್ರಗೊಂಡಿತು. ಸಾರಿಗೆ ಬಸ್‌ ಹಾಗೂ ಇತರೆ ವಾಹನಗಳ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಕೂಡಲೇ ವಾಹನಗಳ ಮಾರ್ಗ ಬದಲಾಯಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ಮೇಲೆಯೇ ರೈತರು ಮಲಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗೋಣಿ ಬಸಪ್ಪ ಮಾತನಾಡಿ, ಟಾಟಾ ಪವರ್‌ ಕಂಪನಿಗೆ ರಾಜ್ಯದ ವಿದ್ಯುತ್‌ ಇಲಾಖೆಯನ್ನು ಒತ್ತೆ ಹಾಕಲು ಅರ್ಜಿ ಹಾಕಿದೆ. ಕೂಡಲೇ ಸರ್ಕಾರ ರೈತ ಪರ ನಿಲ್ಲಬೇಕಿದೆ. ವಿದ್ಯುತ್‌ ಖಾಸಗೀಕರಣಕ್ಕೆ ಕೈಜೋಡಿಸಿದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿ.ಬಿ. ಚನ್ನಬಸಪ್ಪ, ಮುಜ್ಬೂರ್‌ ರೆಹಮಾನ್‌ ಮಾತನಾಡಿ, ರೈತರ ಬೆನ್ನೆಲುಬು ಮುರಿಯಲು ಹೊರಟಿರುವ ಸರ್ಕಾರ ಡಾ.ಬಿ.ಆರ್‌.ಅಂಬೇಡ್ಕರ್‌ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ. ನದಿ ಮತ್ತು ಕೊಳವೆ ಬಾವಿ ಪಂಪ್‌ಸೆಟ್‌ಗೆ ಮೀಟರ್‌ ಹಾಕಿ ರಣಹದ್ದುಗಳಂತೆ ರೈತರನ್ನು ಕುಕ್ಕಿ ತಿನ್ನುವಂತಹ ಕೆಲಸಕ್ಕೆ ಮುಂದಾಗುತ್ತಿದ್ದಾರೆಂದು ದೂರಿದರು.


ಕೆಆರ್‌ಎಸ್‌ ಪಕ್ಷದ ಚಂದ್ರಶೇಖರ ದೊಡ್ಮನಿ ಮಾತನಾಡಿ, ರೈತರ ಫಲವತ್ತಾದ ಭೂಮಿ ಕಿತ್ತುಕೊಂಡು ಸೋಲಾರ್‌ ಹಾಕುತ್ತಿದ್ದಾರೆ. ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿದೆ. ಇದರಿಂದ ರೈತರ ಮಕ್ಕಳಿಗೆ ಕೆಲಸ ಇಲ್ಲದೇ ಬೀದಿಗೆ ಬೀಳುತ್ತಿದ್ದಾರೆ. ಕೆಲಸ ಅರಸಿ ಗುಳೆ ಹೋಗಬೇಕಾಗುತ್ತದೆ ಎಂದರು.

ಸಂಘದ ತಾಲೂಕು ಅಧ್ಯಕ್ಷ ಎಚ್‌.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ಮಾತನಾಡಿ, ವಿದ್ಯುತ್‌ ವ್ಯಾಪಾರಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಮೂಲಭೂತ ಸೌಕರ್ಯ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆ ಕೈಬಿಡಬೇಕು. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸಾಮಾನ್ಯ ಜನರು ಹೆಚ್ಚಿನ ಆರ್ಥಿಕ ಹೊರೆ ಎದುರಾಗುತ್ತದೆ. ಟಾಟಾ ಪವರ್ ಕಂಪನಿ ಸಲ್ಲಿಸಿರುವ ವಿದ್ಯುತ್ ವಿತರಣಾ ಪರವಾನಗಿ ಅರ್ಜಿಯನ್ನು ತಕ್ಷಣ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಫಕ್ಕೀರಪ್ಪ, ಉಪಾಧ್ಯಕ್ಷ ವಿಠ್ಠಲ್ ನಾಯ್ಕ, ಬಿ.ಬಸವನಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷ ಗನಿಸಾಬ್, ಕಾರ್ಯದರ್ಶಿ ಗಿರೀಶ್, ದುರುಗಪ್ಪ, ವೆಂಕಟೇಶ ನಾಯ್ಕ, ಚಂದ್ರಶೇಖರ್ ನಾಯ್ಕ, ದುರ್ಗಾನಾಯ್ಕ, ಚಂದ್ರ ನಾಯ್ಕ, ಕುಬ್ಯಾ ನಾಯ್ಕ, ಬೋಜ್ಯಾನಾಯ್ಕ, ಯಂಕಾನಾಯ್ಕ, ಗಿರಿಯಪ್ಪ, ಬಸವರಾಜ, ಕೆಆರ್‌ಎಸ್‌ ಪಕ್ಷದ ಜಿಲ್ಲಾಧ್ಯಕ್ಷ ಸುಭಾನಸಾಬ್ ಸೇರಿದಂತೆ ಇತರರು ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.