ಹೂವಿನಹಡಗಲಿಯಲ್ಲಿ ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ

| Published : Apr 30 2024, 02:02 AM IST

ಹೂವಿನಹಡಗಲಿಯಲ್ಲಿ ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ನಡೆಯುತ್ತಿರುವ ಚುನಾವಣೆಯ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವ ರಾಜಕೀಯ ನಾಯಕರಿಗೆ ಕಣ್ಣು ಎದುರಿಗೆ ಕಾಣುತ್ತಿರುವ ರೈತರ ಸಮಸ್ಯೆ ಕಾಣುತ್ತಿಲ್ಲ.

ಹೂವಿನಹಡಗಲಿ: ರಾಜ್ಯಕ್ಕೆ ಆವರಿಸಿದ ಭೀಕರ ಬರದ ನಡುವೆ ರೈತರು, ಕೊಳವೆಬಾವಿ ನೀರು ಬಳಸಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಪರದಾಡುವಂತಾಗಿದೆ. ಬೆಳೆಗಾರರು ಕಂಗಾಲಾಗಿ ಕಣ್ಣೀರು ಇಡುತ್ತಿದ್ದಾರೆ. ಯಾವ ರಾಜಕಾರಣಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರರ ರಾಜ್ಯಾಧ್ಯಕ್ಷ ಎನ್‌.ಎಂ. ಸಿದ್ದೇಶ ಹೇಳಿದರು.ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ, ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಮತ್ತು ರೈತರ ಸಂಘ ಸೇರಿದಂತೆ ಇತರೆ ಸಂಘಟನೆಗಳು ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡಿದ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಈರುಳ್ಳಿ ಬೆಳೆಗಾರರಿದ್ದಾರೆ. ಬರದಲ್ಲಿ ಅತಿ ಹೆಚ್ಚು ಖರ್ಚು ಮಾಡಿ ಈರುಳ್ಳಿ ಬೆಳೆದಿರುವ ರೈತರಿಗೆ ಬೆಲೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರ ಕೂಡಲೇ ಹೊರ ದೇಶಗಳಿಗೆ ಈರುಳ್ಳಿ ರಫ್ತುಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ದೇಶದಲ್ಲಿ ನಡೆಯುತ್ತಿರುವ ಚುನಾವಣೆಯ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವ ರಾಜಕೀಯ ನಾಯಕರಿಗೆ ಕಣ್ಣು ಎದುರಿಗೆ ಕಾಣುತ್ತಿರುವ ರೈತರ ಸಮಸ್ಯೆ ಕಾಣುತ್ತಿಲ್ಲ. ಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯದ ಎಲ್ಲ ಕಡೆಗೂ ವಿಭಿನ್ನವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕನಿಷ್ಠ ₹5 ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಕಲಬುರಗಿ ವಿಭಾಗದ ಕಾರ್ಯದರ್ಶಿ ಗೋಣಿ ಬಸಪ್ಪ ಮಾತನಾಡಿ, ದೇಶದ ರೈತ ಹಿತ ಕಾಪಾಡಲು ಸ್ವಾಮಿನಾಥನ್‌ ಆಯೋಗದ ವರದಿಯನ್ನು ಜಾರಿಗೆ ತರುತ್ತೇನೆಂದು ಜನರಿಗೆ ಸುಳ್ಳು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದ ಕಾರಣ, ಅಪಾರ ನಷ್ಟ ಅನುಭಸಿ 70 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸೋಮಶೇಖರಪ್ಪ ಮಾತನಾಡಿ, ದೇಶದಲ್ಲಿ ಬೆಲೆದಿರುವ ಈರುಳ್ಳಿಯನ್ನು ರಫ್ತುಗೆ ಅವಕಾಶ ನೀಡದ ಕಾರಣ ಬೆಲೆ ಕುಸಿತಕ್ಕೆ ಕಾರಣವಾಗಿದ್ದು, ರೈತರು ಅತಿ ಹೆಚ್ಚು ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದಾರೆ. ಖರ್ಚು ಮಾಡಿರುವ ಹಣವೂ ಕೂಡಾ ರೈತರಿಗೆ ಬರದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರ ಬದುಕು ಬೀದಿಗೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ ಕೋಗಳಿ, ಮುದೇಗೌಡ ಬಸವರಾಜ, ಮೂಲಿಮನಿ ಶರಣಪ್ಪ, ಭದ್ರಗೌಡ, ಬೆನ್ನೂರು ಹಾಲಪ್ಪ, ಇಟ್ಟಗಿ ಬೆಟ್ಟಜ್ಜ, ಎನ್‌.ಎಂ.ಪ್ರಶಾಂತ, ಹಕ್ಕಂಡಿ ಮಹಾದೇವಪ್ಪ, ರವಿ ಸೊಪ್ಪಿನ್‌ ಸೇರಿದಂತೆ ಇತರಿದ್ದರು.