ಹಾವೇರಿ,ರಾಣೆಬೆನ್ನೂರು ಕಡೆಗೆ ಹೋಗುವ ವಾಹನ ಮತ್ತು ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ ಕಡೆಗೆ ಹೋಗುವ ವಾಹನಗಳು ಸೇರಿದಂತೆ ಇನ್ನಿತರ ಕಡೆಗಳಿಗೆ ಸಂಚಾರ ತಡೆದು ರೈತರು ಆಕ್ರೋಶ
ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದಲ್ಲಿ ನೂರಾರು ರೈತರು ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಪ್ರತಿ ಟನ್ ಕಬ್ಬಿನ ₹5500ಗಳ ನ್ಯಾಯಯುತ ಬೆಲೆ ನಿಗದಿ ಮಾಡಬೇಕೆಂಬ ಒತ್ತಾಯಕ್ಕೆ ಇಡೀ ಹೂಳಲು, ಮೈಲಾರ ಗ್ರಾಮದಲ್ಲಿನ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ರೈತರಿಗೆ ಹಾಗೂ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ರೈತ ಪ್ರತಿಭಟನಾಕಾರರು ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಬಂದ್ ಮಾಡಿದ ಪರಿಣಾಮ ಬೆಳಗಿನಿಂದಲೇ ಹಾವೇರಿ,ರಾಣೆಬೆನ್ನೂರು ಕಡೆಗೆ ಹೋಗುವ ವಾಹನ ಮತ್ತು ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ ಕಡೆಗೆ ಹೋಗುವ ವಾಹನಗಳು ಸೇರಿದಂತೆ ಇನ್ನಿತರ ಕಡೆಗಳಿಗೆ ಸಂಚಾರ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಮುಂಗಾರು, ಹಿಂಗಾರು ಮಳೆ ಇಲ್ಲದೇ ಅಂತರ್ಜಲ ಕುಸಿದಿದೆ. ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ, ಕಬ್ಬಿನ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಳವಾಗಿದ್ದರೂ ಕಬ್ಬಿಗೆ ನ್ಯಾಯಯುತ ಬೆಲೆ ಘೋಷಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿವೆ, ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರ ಹಾಕಿದರು.ಹರಪನಹಳ್ಳಿ ಸಹಾಯಕ ಆಯುಕ್ತ ಸುರೇಶಕುಮಾರ, ವಿಜಯನಗರ ಎಡಿಸಿ ಪಿ.ಎನ್. ಲೋಕೇಶ ಪ್ರತಿಭಟನಾ ಸ್ಥಳಕ್ಕೆ ಬಂದು ಕಬ್ಬಿನ ದರ ನಿಗದಿ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ. ರಾಜ್ಯ ಹೆದ್ದಾರಿ ಬಂದ್ ಮಾಡದೇ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ರೈತರನ್ನು ಮನವೊಲಿಸಲು ಪ್ರಯತ್ನಿಸಿದ್ದರೂ ವಿಜಯಪುರ, ಗೂರ್ಲಾಪೂರ ಬಳಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಕೈ ಬಿಟ್ಟರೇ ಮಾತ್ರ ನಾವು ಬಿಡುತ್ತೇವೆ. ಇಲ್ಲದಿದ್ದರೇ ಇಡೀ ರಾತ್ರಿ ಪ್ರತಿಭಟನೆ ಹೀಗೆ ಮುಂದುವರೆಯಲಿದೆ ಎಂದು ರೈತರು ಬಿಗಿ ಪಟ್ಟು ಹಿಡಿದಿದ್ದರು.
ಪ್ರತಿಭಟನೆ ನಡೆಯುತ್ತಿರುವ ಹೊಳಲು ಗ್ರಾಮಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಭೇಟಿ ನೀಡಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲವಾಗಿ ನಿಂತು ಮಾತನಾಡಿದರು.
ರೈತ ಮುಖಂಡರಾದ ಕೋಡಬಾಳ ಚಂದ್ರಪ್ಪ, ಕೋಡಬಾಳ ಹನುಮಂತಪ್ಪ, ಹರವಿ ಪ್ರಕಾಶ, ಶಿಗ್ಲಿ ಅಶೋಕ, ಹೊಟ್ಟಿಗೌಡ್ರ ಮಂಜುನಾಥ, ಚನ್ನವೀರಗೌಡ, ಮುದ್ದಣ್ಣನವರ ಬಸವರಾಜಪ್ಪ, ನಾರಮ್ಮನವರ ವೀರಣ್ಣ, ಮುದಿಗೇರಿ ನರೇಂದ್ರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗಿಲ್ಲ.ಬೆಳಗಿನಿಂದ ಬಸ್ ಸೇರಿದಂತೆ ಇತರೆ ಯಾವುದೇ ವಾಹನಗಳ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಬೇರೆಡೆಗೆ ಹೋಗಲು ಪರದಾಡಿದ ಪ್ರಸಂಗ ಜರುಗಿತು. ಪ್ರತಿಭಟನೆ ಜೋರಾಗುತ್ತಿದಂತೆಯೇ ಹೊಳಲು ಮೈಲಾರ ಭಾಗದಲ್ಲಿರುವ ಖಾಸಗಿ ಶಾಲೆಗಳಿಗೆ ಶಾಲಾ ಆಡಳಿತ ಮಂಡಳಿ ರಜಾ ಘೋಷಣೆ ಮಾಡಿದೆ.