ರಾಮನಗರ: ಪ್ರತಿ ಟನ್ ಕಬ್ಬಿಗೆ 5500 ರು.ಬೆಲೆ ನಿಗದಿ ಮತ್ತು ಎಫ್‌ಆರ್‌ಪಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಭಾಗದ ರೈತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು

ರಾಮನಗರ: ಪ್ರತಿ ಟನ್ ಕಬ್ಬಿಗೆ 5500 ರು.ಬೆಲೆ ನಿಗದಿ ಮತ್ತು ಎಫ್‌ಆರ್‌ಪಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಭಾಗದ ರೈತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಚಳವಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರು ರಾಮನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಒಂದು ತಿಂಗಳಿನಿಂದ ರಾಜ್ಯಾದ್ಯಂತ ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ರೈತರು ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕುಗಳನ್ನು ಈಡೇರಿಸುವ ಬದಲು ವಿನಾಕಾರಣ ದಿನ ದೂಡುತ್ತಾ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಒಂದು ಕಡೆ ಗದ್ದೆಯಲ್ಲಿ ಕಬ್ಬು ಒಣಗುತ್ತಿದ್ದರೆ ಇನ್ನೊಂದು ಕಡೆ ರೈತರ ಆಕ್ರೋಶ ಬೆಳೆಯುತ್ತಿದೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ಉದ್ಬವಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಯೇ ಕಾರಣವಾಗಿದೆ. ಈ ತಕ್ಷಣವೇ ಸಕ್ಕರೆ ಕಾರ್ಖಾನೆ ಗಳಿಂದ ರೈತರಿಗೆ ನೀಡಬೇಕಿರುವ ದರವನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕು ಹಾಗೂ ರಾಜ್ಯ ಸರ್ಕಾರ ಕೂಡ ಟನ್ ಒಂದಕ್ಕೆ ತಮಿಳುನಾಡಿನ ಮಾದರಿಯಲ್ಲಿ ಪ್ರೊತ್ಸಾಹ ಧನ ಘೋಷಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿದರು.

ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂಗಳ ರೈತರ ಭೂ ಹಿತರಕ್ಷಣಾ ಸಂಘದ ಪ್ರಕಾಶ್ ಮಾತನಾಡಿ, ಕರ್ನಾಟಕ ಸರ್ಕಾರದ ಬೆಲೆ ಆಯೋಗ ತಿಳಿಸಿರುವ ಕಬ್ಬು ಬೆಳೆ ವೆಚ್ಚವನ್ನು ಆಧರಿಸಿ ಶೇ.50ರಷ್ಟು ಹೆಚ್ಚು ಸೇರಿಸಿ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿ ಮಾಡಬೇಕು. ಈ ಎಫ್‌ಆರ್‌ಪಿ ನಿಗದಿಗೆ ಶೇ.10.25 ಸಕ್ಕರೆ ಇಳುವರಿ ಅನ್ನು ಬೇಸ್ ಆಗಿ ಪರಿಗಣನೆ ಬದಲಾಗಿ ಶೇ 9.5 ಅನ್ನು ಆಧಾರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಎಫ್‌ಆರ್‌ಪಿ ಜತೆಗೆ ರಾಜ್ಯ ಸರ್ಕಾರಗಳು ಆಯಾ ಪ್ರದೇಶದ ಅನುಭವಕ್ಕೆ ಅನುಗುಣವಾಗಿ ರಾಜ್ಯ ಸಲಹಾ ಬೆಲೆ(ಎಸ್‌ಎಪಿ) ನಿಗದಿ ಮಾಡಬೇಕು. ಎಫ್‌ಆರ್‌ಪಿ ಪಾವತಿಸಿದ ನಂತರ ಉಪ ಉತ್ಪನ್ನಗಳ ಲಾಭಾಂಶವನ್ನು ಪ್ರತ್ಯೇಕವಾಗಿ ಪರಿಗಣಿಸಿ ಕನಿಷ್ಟ ಶೇ.50ರಷ್ಟನ್ನು ಕಬ್ಬು ಬೆಳೆಗಾರರಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ರೈತಸಂಘ ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಈಗಿರುವ ತಾರತಮ್ಯ ನೀತಿ ಹಾಗೂ ಆಹಾರ ಭದ್ರತೆಗೆ ಮಾರಕವಾಗಿರುವ ಅಂಶಗಳು ಇರುವ ಪೆಟ್ರೋಲಿಯಂ ಕಂಪನಿಗಳು ಹಾಗೂ ಸಕ್ಕರೆ ಕಾರ್ಖಾನೆ ಕೇಂದ್ರೀತ ಎಥನಾಲ್ ನೀತಿಯನ್ನು ಬದಲಾಯಿಸಬೇಕು. ಕಬ್ಬು ನಿಯಂತ್ರಣ ಮಂಡಳಿ ಆದೇಶ 1966 ಕಡ್ಡಾಯವಾಗಿ ಅನುಷ್ಠಾನ ಆಗುವಂತೆ ಮತ್ತಷ್ಟು ರೈತ ಪರವಾಗಿ ಬಲಪಡಿಸಬೇಕು. ಸಾರ್ವಜನಿಕ ಹಾಗೂ ಸಹಕಾರಿ ಕಾರ್ಖಾನೆಗಳಿಗೆ ಮಾರಕವಾಗಿರುವ, ರೈತ ಹಿತಕ್ಕೆ ತೊಂದರೆ ಉಂಟು ಮಾಡುತ್ತಿರುವ ರಂಗರಾಜನ್ ಶಿಫಾರಸ್ಸು ಆಧಾರಿತ ಕಬ್ಬು ಹಾಗೂ ಸಕ್ಕರೆ ನೀತಿಯನ್ನು ರದ್ದುಪಡಿಸಿ ರೈತರ ಹಿತ ಕಾಪಾಡುವ ಸಕ್ಕರೆ ಹಾಗೂ ಕಬ್ಬು ನೀತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಂ.ಆರ್.ನಾಗರಾಜು, ಶ್ರೀನಿವಾಸ್, ಬಿ.ಮಂಜುನಾಥ್, ಕೆ.ಎನ್.ರಾಜು, ಅಶ್ವತ್ಥ್, ರಾಧಾಕೃಷ್ಣ, ಮಂಜುನಾಥ್ ಲಕ್ಕಪ್ಪ, ರೇವಣ್ಣ, ಹನುಮಂತಯ್ಯ, ಸುಮಿತ್ರಮ್ಮ, ನೇತ್ರಾವತಿ, ಸುಮಾ ಇತರರು ಭಾಗವಹಿಸಿದ್ದರು.

ಬಾಕ್ಸ್‌..............

ಕಬ್ಬು ಬೆಳೆಗಾರರ ಹಕ್ಕೋತ್ತಾಯಗಳು ?

1.ಪ್ರತಿ ಟನ್‌ ಕಬ್ಬಿಗೆ 5 ,500 ರು. ಬೆಲೆ ನಿಗದಿಯಾಗಲಿ

2.ಕೇಂದ್ರ ಸರ್ಕಾರ ಎಫ್‌ಆರ್‌ಪಿ ಹೆಚ್ಚಿಸಲಿ

3.ರಾಜ್ಯ ಸರ್ಕಾರ 900 ರು. ಎಸ್‌ಎಪಿ ಘೋಷಿಸಲಿ

4.ಕಬ್ಬು ಸೇರಿದಂತೆ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತಪಡಿಸಲಿ

5.ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಿ

6.ಕಬ್ಬಿನ ತೂಕಮಾಪನ, ಸಕ್ಕರೆ ಇಳುವರಿಮತ್ತು ಪಾವತಿಯಲ್ಲಿ ಪಾರದರ್ಶಕತೆ ಇರಲಿ

7.ರೈತರ ಬಾಕಿ ಪಾವತಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು.

31ಕೆಆರ್ ಎಂಎನ್ 1,2.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರು ಪ್ರತಿಭಟನೆ ನಡೆಸಿದರು.