ಸಾರಾಂಶ
ಅಕಾಲಿಕ ಮಳೆಯಿಂದಾಗಿ ತಾಲೂಕಿನಾದ್ಯಂತ ಬೆಳೆಗಳು ಸಂಪೂರ್ಣ ನಾಶಗೊಂಡಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಷ್ಟ್ರೀಯ ರೈತರ ಸಂಘದ ವತಿಯಿಂದ ಶನಿವಾರ ಮಿನಿವಿಧಾನಸೌಧ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸವದತ್ತಿ
ಅಕಾಲಿಕ ಮಳೆಯಿಂದಾಗಿ ತಾಲೂಕಿನಾದ್ಯಂತ ಬೆಳೆಗಳು ಸಂಪೂರ್ಣ ನಾಶಗೊಂಡಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಷ್ಟ್ರೀಯ ರೈತರ ಸಂಘದ ವತಿಯಿಂದ ಶನಿವಾರ ಮಿನಿವಿಧಾನಸೌಧ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್ ತಿಂಗಳಲ್ಲಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಹತ್ತಿ, ಮೆಕ್ಕೆಜೋಳ, ಈರುಳ್ಳಿ, ಸೊಯಾಬೀನ್ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದ್ದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ತುಂಬಿದ ರೈತರಿಗೆ ತಕ್ಷಣ ಮಧ್ಯಂತರ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಶಿವಾನಂದ ಸರದಾರ ಮಾತನಾಡಿ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಂದ ರೈತರು ಹೆಚ್ಚಿನ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಕಂದಾಯ ಮತ್ತು ಕೃಷಿ ಇಲಾಖೆಯಿಂದ ತಕ್ಷಣ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ಕಟ್ಟಿಂಗ್ ಮತ್ತು ಸಾರಿಗೆ ವೆಚ್ಚ ಹೊರತುಪಡಿಸಿ ಟನ್ ಕಬ್ಬಿಗೆ ₹೩೫೦೦ ಬಿಲ್ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರವರಿಗೆ ಮನವಿ ಸಲ್ಲಿಸಿದರು.ದ್ಯಾಮನಗೌಡ ಪಾಟೀಲ, ಸುರೇಶ ಸಂಪಗಾವಿ, ಬಾಪುಗೌಡ ಪಾಟೀಲ, ಮಂಜುನಾಥ ಕುರಿ, ಶಿವಲಿಂಗಪ್ಪ ಪಾಟೀಲ, ಶೇಖರ ಬಳಿಗಾರ, ದ್ಯಾಮನ್ನ ಕಡಕೋಳ, ಯಲ್ಲಪ್ಪ ಅಂತಕನವರ, ಶ್ರೀಶೈಲ ಬಟ್ಟೆನವರ, ಸುರೇಶ ಅಂಗಡಿ, ಫಕ್ಕೀರಪ್ಪ ಪಟ್ಟದಕಲ್ಲ, ಸುರೇಶ ಕಿತ್ತೂರ ಸೇರಿದಂತೆ ರೈತ ಸಂಘಟನೆಯ ಸದಸ್ಯರು ಇದ್ದರು.