ಮಾಗಡಿ: ವಿವಿಧ ಬೇಡಿಕೆಗಳ ಈಡೇರಿಸದೆ ನಿರ್ಲಕ್ಷ್ಯವಹಿಸಿರುವ ತಾಲೂಕು ಆಡಳಿತದ ವಿರುದ್ಧ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಮುಂದೆ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದ ರೈತರ ಮನವಿ ಸ್ವೀಕರಿಸಲು ಬರದೆ ರೈತರನ್ನು ಕಡೆಗಣಿಸಿದ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಕಚೇರಿ ಮುಂದಿನ ಬಿ.ಕೆ.ರಸ್ತೆಗೆ ತೆರಳಿ ರಸ್ತೆ ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಮನೋಜ್ ರೈತರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು. ರೈತರು ಅನುಮತಿ ಪಡೆಯದೆ ರಸ್ತೆ ತಡೆ ನಡೆಸಿರುವುದು ಸರಿಯಲ್ಲ. ನಿಮ್ಮ ಸಮಸ್ಯೆಗಳಿದ್ದರೆ ಕಚೇರಿ ಮುಂದೆ ಪ್ರತಿಭಟಿಸಿ ಎಂಬ ಹೇಳಿಕೆಗೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮುಕಿ ನಡೆದು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಹಾಗೂ ರೈತ ಮುಖಂಡರಾದ ಶಿವಲಿಂಗಯ್ಯ, ಚೆನ್ನಿಗರಾಯಪ್ಪ, ಬುಡೇನ್ಸಾಬ್, ಗೊಲ್ಲರ ಹಟ್ಟಿ ಚಿಕ್ಕಣ್ಣ ಇತರರನ್ನು ಪ್ರತಿಭಟನಾ ಸ್ಥಳದಿಂದ ತೆರವು ಮಾಡಿಸಿದರು.
ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಕೆಶಿಪ್ ಅಧಿಕಾರಿಗಳು, ಎಇಇ, ಮತ್ತು ಇಇ, ರಾಗಿ ಖರೀದಿ ಕೇಂದ್ರ ಅಧಿಕಾರಿ, ಬೆಸ್ಕಾಂ ಅಧಿಕಾರಿಗಳು, ಅರಣ್ಯ, ಕೃಷಿ, ತೋಟಗಾರಿಕೆ, ಕೆಎಸ್ಆರ್‌ಟಿಸಿ, ಅಬಕಾರಿ ಅಧಿಕಾರಿಗಳನ್ನು ಸಭೆ ಕರೆದು ರೈತರೊಂದಿಗೆ ಚರ್ಚಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಬಾಲಕೃಷ್ಣ ಮುಂದಾಗಬೇಕು. ರಾಗಿ ಖರೀದಿಯನ್ನು ಸ್ಥಗಿತಗೊಳಿಸಿರುವುದರ ವಿರುದ್ಧ ಮಂಗಳವಾರ ರಸ್ತೆಗೆ ರಾಗಿ ಸುರಿದು ಪ್ರತಿಭಟನೆ ನಡೆಸುತ್ತೇವೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರು ಮುಂದಾಗಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ಕಚೇರಿ ನೌಕರರ ರಮೇಶ್ ರೈತರಿಂದ ಮನವಿ ಸ್ವೀಕರಿಸಿದರು. ರೈತ ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
(ಫೋಟೋ ಕ್ಯಾಫ್ಷನ್)
ಮಾಗಡಿ-ಬೆಂಗಳೂರು ಮುಖ್ಯರಸ್ತೆ ತಡೆದು ತಾಲೂಕು ಆಡಳಿತದ ವಿರುದ್ಧ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.