ಸಾರಾಂಶ
ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೆಳಗಾವಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೆಳಗಾವಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ರೈತರು ಪ್ರತಿಭಟನೆ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಜೀವಂತಗೊಳಿಸುವುದರ ಜೊತೆಗೆ ಖಾಸಗಿ ಮಾರುಕಟ್ಟೆ ನಿಯಂತ್ರಣ ಮಾಡಬೇಕು. ತೂಕದಲ್ಲಿ ಆಗುತ್ತಿರುವ ಮೋಸ ತಡೆಗೆ ಕ್ರಮ ಕೈಗೊಳ್ಳಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಸೋಯಾಬೀನ್ ಮತ್ತು ಹೆಸರು ಖರೀದಿ ಕೇಂದ್ರವನ್ನು ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ಒದಗಿಸುವುದು, ಅಕ್ರಮ ಸಕ್ರಮ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು. ನೆರೆ ಮತ್ತು ಬರ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು. ರೈತರ ಮೇಲಿನ ಸಂಪೂರ್ಣ ಸಾಲ ಮನ್ನಾ ಮಾಡುವುದರ ಜೊತೆಗೆ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಖಾಲಿ ಇರುವ ರೈತರಿಗೆ ಸಂಬಂಧಿಸಿದ ಎಲ್ಲ ಇಲಾಖೆಯಲ್ಲಿ ಸಿಬ್ವಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ, ರಾಜು ಪವಾರ್, ಸುರೇಶ ಪರಗಣ್ಣವರ, ಕಿಶನ್ ನಂದಿ, ಶರಣಪ್ಪ ಮಳ್ಳಿ ಇತರರು ಪಾಲ್ಗೊಂಡಿದ್ದರು.