ಕುಣಿಗಲ್ ಕೆರೆಯ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಬಿಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ರೈತ ಪರ್ವ ಸಂಘಟನೆಯ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಹೇಮಾವತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಕೆರೆಯ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಬಿಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ರೈತ ಪರ್ವ ಸಂಘಟನೆಯ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಹೇಮಾವತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ್ ಮುನಿಯಪ್ಪ ದೊಡ್ಡ ಕೆರೆಯ ನೀರನ್ನು ಕಳೆದ 20 ವರ್ಷಗಳಿಂದ ಸಾರ್ವಜನಿಕರ ಕೃಷಿ ಭೂಮಿಗಳಿಗೆ ಬಿಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಕೆರೆ ಹಿಂಭಾಗದಲ್ಲಿರುವ ಸಾವಿರಾರು ರೈತರಿಗೆ ಸಮಸ್ಯೆಯಾಗಿದೆ. ಕಲ್ಮಷ ತುಂಬಿದ ಕಾಲುವೆಗಳು ಚರಂಡಿಗಳಾಗಿ ಪರಿವರ್ತನೆಗೊಂಡಿವೆ. ಆದ್ದರಿಂದ ನೀರು ಹರಿಸಬೇಕೆಂದು ಒತ್ತಾಯಿಸಿದರು. ರಾಮಬಾಣಹಂತ ಮತ್ತು ಲಕ್ಷ್ಮಿ ಬಾಣಹಂತ ಎರಡು ಕಾಲುವೆಗಳು ಇವೆ. ಅವುಗಳು ಸಾರ್ವಜನಿಕರಿಗೆ ಕೃಷಿ ಭೂಮಿಗಳಿಗೆ ನೀರು ಒದಗಿಸುತ್ತಿದ್ದಂತಹ ಕಾಲುವೆಯಾಗಿದ್ದು, ನೀರಿಲ್ಲದೆ ತ್ಯಾಜ್ಯಗಳು ತುಂಬಿವೆ. ಅದನ್ನು ದುರಸ್ತಿ ಮಾಡಬೇಕು. ತಕ್ಷಣ ನೀರು ಹರಿಸುವ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಗೊಂಡ ನೂರಾರು ರೈತರು ಬೈಕ್ ರ್ಯಾಲಿ ಮುಖಾಂತರ ಹೇಮಾವತಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿದರು . ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಹೇಮಾವತಿ ಉಪ ವಿಭಾಗಾಧಿಕಾರಿ ರವಿಕುಮಾರ್ ಎರಡು ನಾಲೆಗಳ ಮುಖಾಂತರ ಕಾಲುವೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ತೂಬುಗಳನ್ನು ಓಪನ್ ಮಾಡುವ ಕೆಲಸ ಪ್ರಾರಂಭ ಆಗಿದೆ. ಕೆಲವೇ ದಿನಗಳಲ್ಲಿ ಗೇಟ್ ಮುಖಾಂತರ ನೀರನ್ನು ರೈತರ ಭೂಮಿಗೆ ಹರಿಸುವ ಕೆಲಸ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಸತೀಶ್ ಕಾರ್ಯದರ್ಶಿ ಉಮಾಶಂಕರ್ ಬಿದನಗೆರೆ ಅಜಯ್, ತಳ್ಳಿ ಮಂಜುನಾಥ್ ಪಾರ್ಥಸಾರಥಿ ಶಿವಣ್ಣ ಕಡ್ಲೆಕಾಯಿ ಸೀನಪ್ಪ ಸೇರಿದಂತೆ ಇತರರು ಇದ್ದರು.