ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಹಾಗೂ ಕುಶಾಲನಗರ ಸಂಪರ್ಕ ಕಲ್ಪಿಸುವ ನಾಲ್ಕು ಪಥ ಹೆದ್ದಾರಿ ನಿರ್ಮಾಣದ ಜೊತೆ ರೈತರು ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಕಾಮಗಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.ತಾಲೂಕಿನ ಪಾಲಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಶ್ರೀರಂಗಪಟ್ಟಣ ಹಾಗೂ ಕುಶಾಲನಗರಕ್ಕೆ ಹೋಗುವ ನೂತನ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಪಾಲಹಳ್ಳಿ, ಬಿ.ಅಗ್ರಹಾರ ಹಾಗೂ ಬೆಳಗೊಳದ ಗ್ರಾಮಸ್ಥರು ರೈತರು ತಡೆದು ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದರು.
ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ಶ್ರೀರಂಗಪಟ್ಟಣ ಹಾಗೂ ಕುಶಾಲನಗರಕ್ಕೆ ನೂತನ ಸಂಪರ್ಕ ರಸ್ತೆಗೆ ಈ ಭಾಗದ ರೈತರ ಜಮೀನು ವಶಪಡಿಸಿಕೊಂಡು ಈಗಾಗಲೇ ಕಾಮಗಾರಿ ಆರಂಭಿಸಿದೆ. ಹೆದ್ದಾರಿ ಮಾತ್ರ ನಿರ್ಮಿಸಿ ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸದ ಕಾರಣ ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡುವಂತಾಗಿದೆ. ಬೇರೋಬ್ಬರ ಜಮೀನುಗಳ ಮೇಲೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೆಚ್ಚಿನ ಸಮಸ್ಯೆ ತಲೆದೋರಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಕುಶಾಲನಗರ ಹಾಗೂ ಶ್ರೀರಂಗಪಟ್ಟಣ ಮಾರ್ಗದ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಇದೀಗ ಅದನ್ನು ಗಮನಕ್ಕೆ ತರದೆ ಕಾಮಗಾರಿ ನಡೆಸುತ್ತಿರುವುದು ರೈತರಿಗೆ ದ್ರೋಹ ಮಾಡಿದಂತಿದೆ. ಸ್ಥಳೀಯ ಶಾಸಕರು ಸರ್ಕಾರದ ಗಮನಕ್ಕೆ ತಂದು ರೈತರ ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಸೋಮಶೇಖರ್ ಆಗ್ರಹಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಜಮೀನು ನೀಡಿರುವ ರೈತರು ಇದೀಗ ತಮ್ಮ ಜಮೀನುಗಳಿಗೆ ಹೋಗಲು ಸಾಧ್ಯವಾಗದೆ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ರೈತರು ಬೆಳಗೊಳ, ಬಿ.ಅಗ್ರಹಾರ ಹಾಗೂ ಪಾಲಹಳ್ಳಿ ಗ್ರಾಮದ ಬಳಿ ಆಯಾ ಅಂಡರ್ ಪಾಸ್ ರಸ್ತೆ ನಿರ್ಮಾಣದ ಬಳಿ ಹೆದ್ದಾರಿ ನಿರ್ಮಾಣ ಕಾಮಗಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುವ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಪಾಲಹಳ್ಳಿ ಗ್ರಾಮದ ತಾಂಡಣ್ಣ, ರಾಮಣ್ಣ, ವೆಂಕಟೇಶ್, ಬೆಳಗೋಳ ಸುನೀಲ್, ಹರ್ಷ, ವನಯಕ್, ಬಿ. ಅಗ್ರಹಾರ ಗ್ರಾಮದ ಗಿರೀಶ್, ಸೋಮಶೇಖರ್, ಪ್ರವೀಣ್ ನಾಗರಾಜು ಅಯ್ಯ, ಸೇರಿದಂತೆ ನೂರಾರು ರೈತರು ಇದ್ದರು.