ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ- ಕುಶಾಲನಗರ ಸಂಪರ್ಕ ಕಲ್ಪಿಸುವ ಹೆದ್ದಾರಿಗೆ ಈ ಹಿಂದೆ ಸ್ಥಳೀಯ ರೈತರು ಸರ್ವೀಸ್ ರಸ್ತೆ ನಿರ್ಮಿಸುವಂತೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿ ಸ್ಥಳದಲ್ಲಿ ಹೆದ್ದಾರಿ ಪ್ರಾಧಿಕಾರದವರು ಪೊಲೀಸರನ್ನು ನಿಯೋಜನೆ ಮಾಡಿಕೊಂಡಿದ್ದಾರೆ.ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ಹಾದು ಹೋಗುತ್ತಿರುವ ಕುಶಾಲನಗರ ಹೆದ್ದಾರಿ ಕಾಮಗಾರಿಯಿಂದ ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ ತೆರಳಲು ತೊಂದರೆಯಾಗಲಿದೆ, ಸರ್ವೀಸ್ ರಸ್ತೆ ನಿರ್ಮಿಸಿ, ನಂತರ ಹೆದ್ದಾರಿ ಕಾಮಗಾರಿ ನಡೆಸುವಂತೆ ಪ್ರತಿಭಟನೆ ನಡೆಸಿದ್ದರು.
ಅಲ್ಲದೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದ ರೈತರ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಹೆದ್ದಾರಿಯಿಂದ ಸ್ಥಳೀಯ ರೈತರಿಗಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿ ಬಂದಿದ್ದರು.ಈ ವಿಷಯವಾಗಿ ಯಾವುದೇ ಮಾಹಿತಿ ಹಾಗೂ ಸೂಚನೆ ಬಾರದ ಹಿನ್ನೆಲೆ ಬಿ. ಅಗ್ರಹಾರ, ಪಾಲಹಳ್ಳಿ, ಶ್ರೀರಂಗಪಟ್ಟಣ, ಹೊಸಹಳ್ಳಿ, ಬೆಳಗೊಳ ಸೇರಿ ಇತರೆ ಗ್ರಾಮಗಳ ರೈತರು ಮತ್ತೆ ಸರ್ವೀಸ್ ರಸ್ತೆಗಾಗಿ ಪ್ರತಿಭಟನೆ ಮೂಲಕ ರಸ್ತೆ ಕಾಮಗಾರಿ ತಡೆಯಲು ದಿನಾಂಕ ನಿಗಧಿಗೊಳಿಸುತ್ತಿದ್ದಾರೆ ಎಂದು ಹೈವೇ ರಸ್ತೆ ಕಾಮಗಾರಿ ವಿಳಂಭವಾಗುವ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದವರ ಮನವಿ ಮೇರೆಗೆ ಡಿವೈಎಸ್ಪಿ ಕೃಷ್ಣ ಕುಮಾರ್ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜಿಸಿಕೊಂಡಿದ್ದಾರೆ.
ತಾಲೂಕಿನ ಬೆಳಗೊಳ ಬಳಿಯ ಹಿರಿದೇವಿ ದೇವಾಲಯದ ಮೈದಾನದ ಬಳಿ ಎರಡು ಡಿಎಆರ್ ಪೊಲೀಸರು ಸೇರಿದಂತೆ ಶ್ರೀರಂಗಪಟ್ಟಣದ ವಿವಿಧ ಠಾಣೆಗಳ ಪೊಲೀಸರನ್ನು ನಿಯೋಜಿಸಿ ಕಾಮಗಾರಿಗೆ ವಿಳಂಭವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರಿನ ಲಭ್ಯ, ಬೆಳೆಗಳಿಗೆ ಬಿಡುವ ಕುರಿತು ಚರ್ಚೆಮಂಡ್ಯ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಅಧಿಕಾರಿಗಳೊಂದಿಗೆ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಲಭ್ಯವಿರುವ ನೀರು ಹಾಗೂ ಬೆಳೆಗಳ ಬಗ್ಗೆ ಚರ್ಚೆ ನಡೆಸಲಾಯಿತು.ಸಭೆ ಬಳಿಕ ಮಾತನಾಡಿದ ಸಚಿವರು, ಕಾವೇರಿ ಅಚ್ಚುಕಟ್ಟು ಪ್ರದೇಶ ನಾಲ್ಕು ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟ ಮತ್ತು ವಾಸ್ತವ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಟ್ಟಕಡೆಯ ಭಾಗದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರ ವಹಿಸಬೇಕಿದೆ. ಇದಕ್ಕಾಗಿ ಕೆಲವು ಕೆರೆಗಳಿಗೆ ನೀರು ತುಂಬಿಸುವುದು ಅನಿವಾರ್ಯವಾಗಿದೆ ಎಂದರು.
ಜುಲೈ ಅಂತ್ಯ ಮತ್ತು ಆಗಸ್ಟ್ ತಿಂಗಳಿನಲ್ಲಿ ನೀರಿನ ಅಭಾವ ಉಂಟಾಗದಂತೆ ಈಗಿನಿಂದಲೇ ಲೆಕ್ಕಾಚಾರ ಹಾಕಿ ನೀರು ನಿರ್ವಹಣೆ ಮಾಡುವಂತೆ ನೀರಾವರಿ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಬರಲಿರುವ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ನೀರಿನ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಹಂಚಿಕೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ. ಆರ್ ನಂದಿನಿ ಸೇರಿದಂತೆ ಕಾವೇರಿ ನೀರಾವರಿ ನಿಗಮ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.