ವಡ್ಡರಹಳ್ಳಿ, ವಡ್ಡರಹಳ್ಳಿ ಕೊಪ್ಪಲು ಹಾಗೂ ಹಡೇನಹಳ್ಳಿ ಗ್ರಾಮಗಳು ಎತ್ತಿನಹೊಳೆ ಯೋಜನೆಯಿಂದ ನೀರಿನ ಸೌಲಭ್ಯದಿಂದ ವಂಚಿತವಾಗಿವೆ. ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕುರಿತು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ಶಾಸಕ ಎಚ್.ಕೆ. ಸುರೇಶ್ ಹಾಗೂ ಮಾಜಿ ಸಚಿವ ಬಿ. ಶಿವರಾಂ ಅವರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಎತ್ತಿನಹೊಳೆ ನೀರನ್ನು ಗ್ರಾಮಗಳಿಗೆ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಹಗರೆ ಸಮೀಪದ ವಡ್ಡರಹಳ್ಳಿ, ಕೊಪ್ಪಲು ಹಾಗೂ ಹಡೇನಹಳ್ಳಿ ಗ್ರಾಮಗಳ ಸಮೀಪ ಹಾದು ಹೋಗಿರುವ ಎತ್ತಿನಹೊಳೆ ಕಾಲುವೆಯಿಂದ ಕುಡಿಯಲು ಹಾಗೂ ಕೆರೆಕಟ್ಟೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಕಾಲುವೆ ಬಳಿ ಪ್ರತಿಭಟನೆ ನಡೆಸಿದರು.ವಡ್ಡರಹಳ್ಳಿ ಗ್ರಾಮದ ಮುಖಂಡ ಪುಟ್ಟಸ್ವಾಮಿ ಶೆಟ್ಟಿ ಮಾತನಾಡಿ, ನಮ್ಮ ಗ್ರಾಮದ ಪಕ್ಕದಲ್ಲೇ ಎತ್ತಿನಹೊಳೆ ಕಾಲುವೆ ಹಾದುಹೋಗಿದೆ. ಯೋಜನೆಗಾಗಿ ನಮ್ಮ ಭಾಗದ ರೈತರು ಜಮೀನು ನೀಡಿದ್ದಾರೆ. ಆದರೆ, ನಮ್ಮ ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸುವುದಾಗಲಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಲಿ ಆಗಿಲ್ಲ. ಈ ಕುರಿತು ಹಿಂದೆ ನಡೆದ ಸಭೆಗಳಲ್ಲಿಯೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.ವಡ್ಡರಹಳ್ಳಿ, ವಡ್ಡರಹಳ್ಳಿ ಕೊಪ್ಪಲು ಹಾಗೂ ಹಡೇನಹಳ್ಳಿ ಗ್ರಾಮಗಳು ಎತ್ತಿನಹೊಳೆ ಯೋಜನೆಯಿಂದ ನೀರಿನ ಸೌಲಭ್ಯದಿಂದ ವಂಚಿತವಾಗಿವೆ. ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕುರಿತು ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ಶಾಸಕ ಎಚ್.ಕೆ. ಸುರೇಶ್ ಹಾಗೂ ಮಾಜಿ ಸಚಿವ ಬಿ. ಶಿವರಾಂ ಅವರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಎತ್ತಿನಹೊಳೆ ನೀರನ್ನು ಗ್ರಾಮಗಳಿಗೆ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಗ್ರಾಮಸ್ಥ ಮಂಜುನಾಥ್ ಮಾತನಾಡಿ, ಈ ಮೂರು ಗ್ರಾಮಗಳಲ್ಲಿ ಸುಮಾರು 250 ಮನೆಗಳಿದ್ದು, ಬಹುತೇಕ ಕುಟುಂಬಗಳು ಪರಿಶಿಷ್ಟ ಸಮುದಾಯ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿವೆ. ಮೂಲಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಗಾಗಿ ನಮ್ಮ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 70 ಎಕರೆ ಜಮೀನು ಕಳೆದುಕೊಂಡಿದ್ದೇವೆ. ಆದರೂ ಯೋಜನೆಯಿಂದ ನಮಗೆ ಕುಡಿಯುವ ನೀರಿನ ಸೌಲಭ್ಯ ದೊರೆತಿಲ್ಲ ಎಂದು ದೂರಿದರು.

ಇದೇ ಭಾಗದಲ್ಲಿ ಯಗಚಿ ಏತ ನೀರಾವರಿ ಯೋಜನೆಯ ಕಾಲುವೆಯೂ ಹಾದುಹೋಗಿದೆ. ಆದರೆ ಅದರ ನೀರೂ ನಮ್ಮ ಗ್ರಾಮಗಳ ಕಡೆಗೆ ಬರುತ್ತಿಲ್ಲ. ಹಿಂದೆ ಅರಣ್ಯ ಪ್ರದೇಶದಿಂದ ಹರಿದುಬರುವ ನೀರಿನಿಂದ ಕೆರೆ–ಕಟ್ಟೆಗಳು ತುಂಬುತ್ತಿದ್ದವು. ಇದೀಗ ಕಾಲುವೆ ನಿರ್ಮಾಣವಾಗಿರುವುದರಿಂದ ಹಿಂದಿನ ನೈಸರ್ಗಿಕ ನೀರಿನ ಹರಿವಿಗೂ ಅಡಚಣೆಯಾಗಿದೆ. ಹೀಗಾಗಿ ಅಧಿಕಾರಿಗಳು ಗ್ರಾಮಗಳ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ದಲಿತ ಮುಖಂಡ ಸಗನಯ್ಯ ಮಾತನಾಡಿ, ಯಗಚಿ ಎತ್ತಿನಹೊಳೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ಕೆರೆ-ಕಟ್ಟೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮಸ್ಥರು ಜನಜಾನುವಾರುಗಳೊಂದಿಗೆ ಕಾಲುವೆ ಬಳಿ ಧರಣಿ ನಡೆಸಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವ ಕುರಿತು ಕೂಡ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರಂಗಸ್ವಾಮಿ, ಅಣ್ಣಪ್ಪ, ದೊಡ್ಡತಿಮ್ಮಯ್ಯ, ರಾಜೇಶ್ ಶೆಟ್ಟಿ, ರುದ್ರಶೆಟ್ಟಿ, ದೇವರಾಜು, ತಿರುಮಲಯ್ಯ, ಶಿವಣ್ಣ ಶೆಟ್ರು, ಶಂಕರ ಶೆಟ್ರು, ತಮ್ಮಣ್ಣ, ನಾಗರಾಜು, ದೀಕ್ಷಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.*ಹೇಳಿಕೆ ನಮ್ಮ ಗ್ರಾಮದ ಪಕ್ಕದಲ್ಲೇ ಎತ್ತಿನಹೊಳೆ ಕಾಲುವೆ ಹಾದುಹೋಗಿದೆ. ಯೋಜನೆಗಾಗಿ ನಮ್ಮ ಭಾಗದ ರೈತರು ಜಮೀನು ನೀಡಿದ್ದಾರೆ. ಆದರೆ, ನಮ್ಮ ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸುವುದಾಗಲಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಲಿ ಆಗಿಲ್ಲ. ಪುಟ್ಟಸ್ವಾಮಿ ಶೆಟ್ಟಿ, ವಡ್ಡರಹಳ್ಳಿ